ಭುವನೇಶ್ವರ
ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಡಾನಾ ಚಂಡಮಾರುತ ಉಗ್ರ ಸ್ವರೂಪ ತಾಳಿದೆ. ಗುರುವಾರ ತಡರಾತ್ರಿ ಡಾನಾ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಆ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 110-120 ಕಿಲೋಮೀಟರ್ ಆಗಿತ್ತು. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಚಂಡಮಾರುತದ ಪರಿಣಾಮ ಒಡಿಶಾ, ಪಶ್ಚಿಮ ಬಂಗಾಳ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ಕಂಡುಬಂದಿದೆ.
ಒಡಿಶಾದ ಭುವನೇಶ್ವರ್, ಪುರಿ, ಪರದೀಪ್ ಮತ್ತು ಧಮ್ರಾ ಬಂದರು ಪ್ರದೇಶಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಒಡಿಶಾದ ಸುಮಾರು 12 ಜಿಲ್ಲೆಗಳಲ್ಲಿ ಹೈ ಅಲರ್ಟ್ ಮುಂದುವರಿದಿದೆ. ಮುಂದಿನ ಎರಡು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಒಡಿಶಾ ಸರ್ಕಾರವು ಸುಮಾರು 800 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಭಾರತೀಯ ಕರಾವಳಿ ಕಾವಲು ಪಡೆ, ಎನ್‌ಡಿಆರ್‌ಎಫ್ ಮತ್ತು ಒಡಿಆರ್‌ಎಫ್ ತಂಡಗಳು ರಕ್ಷಣೆ, ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.
ದಾನಾ ಚಂಡಮಾರುತವು ಪಶ್ಚಿಮ ಬಂಗಾಳದಲ್ಲೂ ಭಾರಿ ಹಾನಿಯನ್ನು ಉಂಟುಮಾಡಿದೆ. ಸಿಎಂ ಮಮತಾ ಬ್ಯಾನರ್ಜಿ ರಾತ್ರಿಯಿಡೀ ಜಾಗರಣೆ ಮಾಡಿ ಪರಿಸ್ಥಿತಿ ಅವಲೋಕಿಸಿದರು. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಛತ್ತೀಸ್‌ಗಢದ ಮೂಲಕ ಹಾದುಹೋಗುವ 300 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.
ದಾನಾ ಚಂಡಮಾರುತದ ಪ್ರಭಾವ ಜಾರ್ಖಂಡ್‌ನಲ್ಲೂ ಕಾಣಿಸಿಕೊಂಡಿದೆ. ಮುಂದಿನ ಎರಡು ದಿನಗಳಲ್ಲಿ ರಾಂಚಿ, ಜಮ್‌ಶೆಡ್‌ಪುರ, ಚೈಬಾಸಾ ಮತ್ತು ಸೆರೈಕೆಲಾ-ಖುಂಟಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿರುವ ವಿಶೇಷ ಪರಿಹಾರ ಆಯುಕ್ತರ ಕಚೇರಿಯ ಬಳಿ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ನೆರೆಯ ಪಶ್ಚಿಮ ಬಂಗಾಳ, ಪೂರ್ವ ಮಿಡ್ನಾಪುರ ಕೂಡ ಚಂಡಮಾರುತದ ಪ್ರಭಾವಕ್ಕೆ ಸಾಕ್ಷಿಯಾಗಿವೆ. ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಗುರುವಾರ ಸಂಜೆ ಸ್ಥಗಿತಗೊಂಡಿದ್ದ ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗಳು ಇಂದು ಬೆಳಿಗ್ಗೆ 8 ಗಂಟೆಗೆ ಪುನರಾರಂಭಗೊಂಡಿವೆ.
ಬಂಗಾಳದಲ್ಲಿ 2,43,374 ಜನರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಡಿಶಾದಲ್ಲಿ, ಸುಮಾರು 5.8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು. ಇವರೆಲ್ಲ ಸದ್ಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
