ಕೋಲ್ಕತ್ತಾ:
ಕಳೆದ ಮಧ್ಯರಾತ್ರಿ ನಂತರ ಡಾನಾ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿ ತೀರಭಾಗಕ್ಕೆ ನಿಧಾನವಾಗಿ ಅಪ್ಪಳಿಸಲು ಪ್ರಾರಂಭವಾಗಿ ಇಂದು ಶುಕ್ರವಾರ ಬೆಳಗ್ಗೆ ಸಂಪೂರ್ಣವಾಗಿ ನೆಲೆಗೊಂಡಿತು ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಚಂಡಮಾರುತವು ಒಡಿಶಾದ ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಪಶ್ಚಿಮ ಬಂಗಾಳವನ್ನು ಅಪ್ಪಳಿಸಿದ್ದು, ಕಳೆದ 24 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಬಿರುಸಿನ ಗಾಳಿ ಬೀಸುತ್ತಿದೆ. ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ನಿನ್ನೆ ರಾತ್ರಿಯಿಂದ ಲಘುವಾಗಿ ಸಾಧಾರಣ ಮಳೆಯಾಗಿದೆ. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಪರಿಸ್ಥಿತಿಯನ್ನು ಅವಲೋಕಿಸಿ, ಚಂಡಮಾರುತದಲ್ಲಿ ಯಾವುದೇ ಸಾವು ಸಂಭವಿಸಿದ ವರದಿಯಾಗಿಲ್ಲ, ಎಲ್ಲರ ಸಹಕಾರದಿಂದ ಸಿದ್ಧತೆ ಮತ್ತು ಜನರ ರಕ್ಷಣೆ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ಆದರೆ ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಇಂದು ವೃದ್ಧೆಯೊಬ್ಬರು ಆಶ್ರಯ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಬಂಕುವಲ್ ಗ್ರಾಮದ ಹೇಮಲತಾ ನಾಯಕ್ ಎಂದು ಗುರುತಿಸಲಾದ 82 ವರ್ಷದ ಮಹಿಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇಂದ್ರಪಾರ ಜಿಲ್ಲೆಯ ರಾಜನಗರ ಬ್ಲಾಕ್‌ನ ದಂಗಮಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾಣ್ ಮಂಡಪ್ ದಂಗಮಲ್‌ನಲ್ಲಿ ಸ್ಥಾಪಿಸಲಾದ ಸೈಕ್ಲೋನ್ ಶೆಲ್ಟರ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹವಾಮಾನ ಪರಿಸ್ಥಿತಿ ಸುಧಾರಿಸಿದ ಕಾರಣ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗಳು ಬೆಳಗ್ಗೆ 8 ಗಂಟೆಗೆ ಪುನರಾರಂಭಗೊಂಡವು. ಸೈಕ್ಲೋನ್‌ನಿಂದಾಗಿ ಅಕ್ಟೋಬರ್ 24 ರಂದು ಸಂಜೆ 5 ಗಂಟೆಯಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ದಾನಾ ಚಂಡಮಾರುತದ ಮುನ್ನೆಚ್ಚರಿಕೆಯಾಗಿ ಸುಮಾರು 203 ರೈಲುಗಳನ್ನು ರದ್ದುಗೊಳಿಸಲಾಗಿದೆ. ಇಕೋಆರ್ ಅಧಿಕಾರಿಯ ಪ್ರಕಾರ ವಿಶಾಖಪಟ್ಟಣಂ, ಹೌರಾ ಮತ್ತು ಖರಗ್‌ಪುರದಿಂದ ಭುವನೇಶ್ವರಕ್ಕೆ ರೈಲುಗಳು ಈಗ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಖರಗ್‌ಪುರ-ವಿಶಾಖಪಟ್ಟಣಂ ಮಾರ್ಗದ ರೈಲು ಮಧ್ಯಾಹ್ನ 2 ಗಂಟೆಗೆ ಭದ್ರಕ್ ನಿಲ್ದಾಣಕ್ಕೆ ಆಗಮಿಸುವ ನಿರೀಕ್ಷೆಯಿದೆ. ನಿರ್ದಿಷ್ಟವಾಗಿ ರದ್ದಾದ ರೈಲುಗಳನ್ನು ಹೊರತುಪಡಿಸಿ, ಭುವನೇಶ್ವರ ಮತ್ತು ಪುರಿಯಿಂದ ಹೊರಡಬೇಕಾದ ರೈಲುಗಳು ಇಂದು ಮಧ್ಯಾಹ್ನದ ನಂತರ ತಮ್ಮ ಪ್ರಯಾಣ ಆರಂಭಿಸಿದ್ದಾರೆ.
ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಾನಾ ಭೂಕುಸಿತದ ನಂತರ ಬೆಳಗ್ಗೆ 8 ಗಂಟೆಗೆ ವಿಮಾನ ಕಾರ್ಯಾಚರಣೆ ಪುನರಾರಂಭವಾಯಿತು. ಮುಂಜಾಗ್ರತಾ ನಿನ್ನೆ ಸಂಜೆಯಿಂದಲೇ ವಿಮಾನ ಕಾರ್ಯಾಚರಣೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದರು.
ಪೂರ್ವ ರೈಲ್ವೇ ಅಡಿಯಲ್ಲಿ ಸೀಲ್ದಾ ವಿಭಾಗದ ದಕ್ಷಿಣ ವಿಭಾಗದಲ್ಲಿ ರೈಲು ಸೇವೆಗಳು ಸಹ ಚಂಡಮಾರುತದ ಕಾರಣ ಇಂದು ಬೆಳಗ್ಗೆ 10 ಗಂಟೆಗೆ ಪುನರಾರಂಭಗೊಂಡವು.
