ದಂಗೆ ಏಳಲು ಕರೆ ನೀಡಿರುವ ಹೆಚ್‍ಡಿಕೆ ವಿರುದ್ಧ ಪ್ರತಿಭಟನೆ

ದಾವಣಗೆರೆ:

     ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ದಂಗೆ ಏಳಲು ಕರೆ ನೀಡಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ವರ್ತನೆ ವಿರೋಧಿಸಿ ಹಾಗೂ ಬಿಎಸ್‍ವೈ ನಿವಾಸದ ಎದುರು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಅನಗತ್ಯವಾಗಿ ಪ್ರತಿಭಟನೆ ನಡೆಸಿರುವುದನ್ನು ಖಂಡಿಸಿ, ನಗರದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ನಗರದ ಜಯದೇವ ವೃತ್ತದಲ್ಲಿ ಶಾಸಕ ಪ್ರೊ.ಎನ್.ಲಿಂಗಣ್ಣ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರುಗಳ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಬಿ.ಎಸ್. ಯಡಿಯೂರಪ್ಪ ವಿರುದ್ಧ ದಂಗೆ ಏಳಲು ಕರೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ. ನಮ್ಮ ಪಕ್ಷ ಹಾಗೂ ಕಾರ್ಯಕರ್ತರನ್ನು ಕೆಣಕಿದರೆ ಸರ್ಕಾರದ ಅಧಃಪತನ ಆಗುವುದು ನಿಶ್ಚಿತ. ರಾಜಕಾರಣದಲ್ಲಿ ಪರಸ್ಪರ ವೈಮನಸ್ಸು ಮೂಡುವುದು ಸಹಜ. ಆದರೆ, ಅಷ್ಟಕ್ಕೆ ಮುಖ್ಯಮಂತ್ರಿಗಳು ಯಡಿಯೂರಪ್ಪರ ವಿರುದ್ಧ ದಂಗೆ ಏಳಿ ಎಂಬುದಾಗಿ ಕರೆ ನೀಡಿ, ಗೂಂಡಾವರ್ತನೆ ಪ್ರದರ್ಶಿಸಿರುವುದು ಮೂಖ್ತನದ ಪರಮಾವಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿ.ಎಸ್. ಯಡಿಯೂರಪ್ಪರ ವಿರುದ್ಧ ದಂಗೆ ಏಳಿ ಎಂಬುದಾಗಿ ಕರೆ ನೀಡಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಇತ್ತೀಚೆಗಷ್ಟೆ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ರಾಜ್ಯ ಸರ್ಕಾರ ಇನ್ನೂ ಮೂರು ತಿಂಗಳೊಳಗೆ ಬೀಳಲಿದೆ ಎಂದಿದ್ದರು. ಕುಮಾರಸ್ವಾಮಿಗೆ ನಿಜವಾಗಿಯೂ ತಾಕತ್ತು ಇದಿದ್ದರೆ, ಸಿದ್ದರಾಮಯ್ಯರ ವಿರುದ್ಧ ದಂಗೆ ಏಳಲು ಕರೆ ನೀಡಬೇಕಿತ್ತು. ಈಗಾಗಲೇ ಕಾಂಗ್ರೆಸ್ ಶಾಸಕರೇ ಸಮ್ಮಿಶ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇತ್ತೀಚಿಗೆ ಶಾಸಕ ಮಂಜು ಭೂ ಕಬಳಿಕೆ ಮಾಡಿರುವ ಬಗ್ಗೆ ಆಪಾದಿಸಿದ್ದಾರೆ. ಹೀಗೆ ತಮ್ಮ ಸರ್ಕಾರದಲ್ಲಿರುವ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿರುವ ಕುರಿತು ಮೊದಲು ಕುಮಾರಸ್ವಾಮಿ ಗಮನ ಹರಿಸಬೇಕು. ಯಡಿಯೂರಪ್ಪನವರ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಕಿಡಿಕಾರಿದರು.

     ಮಳೆಯ ಅಭಾವದಿಂದ ರಾಜ್ಯದ 13 ಜಿಲ್ಲೆಗಳಲ್ಲಿ ಬರ ತಾಂಡವ ನೃತ್ಯವಾಡುತ್ತಿದೆ. ಆದರೂ ಸಹ ಒಬ್ಬೆಯೊಬ್ಬ ಶಾಸಕರು ಬರ ಅಧ್ಯಯನಕ್ಕೆ ಮುಂದಾಗದೇ, ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಮುಖ್ಯಮಂತ್ರಿಯೂ ಸಹ ಬರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನೀವು ಬಿಜೆಪಿ ವಿರುದ್ಧ ದಂಗೆ ಎದ್ದರೆ, ನಾವು ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

     ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕಾಗಿರುವ ಮುಖ್ಯಮಂತ್ರಿಗಳೇ ದಾಂಧಲೆ ಎಬ್ಬಿಸಲು ಕರೆ ನೀಡಿರುವುದು ಅತ್ಯಂತ ದುರಾದೃಷ್ಟಕರವಾಗಿದೆ. ಗೂಂಡಾ ವರ್ತನೆ ತೋರುತ್ತಿರುವ ಇಂತಹ ಸರ್ಕಾರವನ್ನು ತಕ್ಷಣವೇ ವಜಾಮಾಡಬೇಕೆಂದು ಆಗ್ರಹಿಸಿದರು.

     ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್. ಶಿವಕುಮಾರ್, ಎನ್.ರಾಜಶೇಖರ್, ಖಜಾಂಚಿ ಕೆ.ಹೇಮಂತ್‍ಕುಮಾರ್, ಮುಖಂಡರುಗಳಾದ ರಾಜಹಳ್ಳಿ ಶಿವಕುಮಾರ್, ಪ್ರಭು ಕಲ್ಬುರ್ಗಿ, ಟಿಂಕರ್ ಮಂಜಣ್ಣ, ಧನುಷ್‍ರೆಡ್ಡಿ, ಸರೋಜಾ ದೀಕ್ಷೀತ್, ಭಾಗ್ಯ ಪಿಸಾಳೆ, ಶಿವಪ್ರಕಾಶ್, ಸಂತೋಷ್, ಟಿಪ್ಪು ಮತ್ತಿತರರು ಭಾಗವಹಿಸಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link