ಐಪಿಎಲ್ ಪ್ರಾರಂಭವಾದರೆ ಸಾಕು ದೇಶದಲ್ಲಿ ಆಟಕ್ಕಿಂತ ಬೆಟ್ಟಿಂಗ್‌ದೆ ಸುದ್ದಿ. ಕರ್ನಾಟಕದಲ್ಲಂತೂ ಎಲೆಕ್ಷನ್‌ಗಿಂತಾ ಹೆಚ್ಚಾಗಿ ಐಪಿಎಲ್ ಭಾರೀ ಚರ್ಚೆಯಲ್ಲಿದೆ. ಇದರ ಜೊತೆಯಲ್ಲೇ ಬೆಟ್ಟಿಂಗ್ ಭರಾಟೆ ಕೂಡಾ ಜೋರಾಗಿದೆ. ರೇಸ್‌ಕೋರ್ಸ್ನಲ್ಲಿ ಕುದುರೆ ಬಾಲಕ್ಕೆ ದುಡ್ಡು ಕಟ್ಟುವ ಮಂದಿ, ಇಸ್ಪೀಟು, ಲಾಟರಿ ಹಿಂದೆ ಬೀಳುವ ಜನರೆಲ್ಲಾ ಇದೀಗ ಐಪಿಎಲ್ ಹಿಂದೆ ಬಿದ್ದಿದ್ದಾರೆ. ಅದರಲ್ಲೂ ಯುವಕರಿಗೆ ಐಪಿಎಲ್ ಬೆಟ್ಟಿಂಗ್ ಗೀಳು ಹೆಚ್ಚಾಗ್ತಿದೆ. ಒಂದೊಂದು ರನ್ನಿಗೂ ದುಡ್ಡು.. ಗೆದ್ದರೂ ಕಾಸು, ಸೋತರೂ ಕಾಸು. ಆದ್ರೆ ಬೆಟ್ಟಿಂಗ್ ಬಲೆಗೆ ಬಿದ್ದೋರ ಜೀವನವೇ ಲಾಸು.
ದಿನದಿಂದ ದಿನಕ್ಕೆ ಕ್ರಿಕೆಟ್ ಎಂಬ ಮಾಯಾಲೋಕ ಯುವ ಜನರನ್ನು ತನ್ನತ್ತ ಸೆಳೆಯುತ್ತಿದ್ದರೆ, ಕ್ರಿಕೆಟ್ ಬೆಟ್ಟಿಂಗ್ ಎಂಬ ಮಾಯಾಜಾಲ ಈ ಯುವ ಜನರನ್ನೇ ಟಾರ್ಗೆಟ್ ಮಾಡಿಕೊಂಡು ಯುವಕರನ್ನು ಹಾಳು ಕೂಪಕ್ಕೆ ತಳ್ಳುತ್ತಿದೆ. ರಾಜ್ಯದ ಹಲವೆಡೆ ಬೆಟ್ಟಿಂಗ್ ದಂಧೆ ನಡೆದಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಬೆಟ್ಟಿಂಗ್ ದಂಧೆಕೋರರು ಬಹುತೇಕ ವರ್ಷಪೂರ್ತಿ ಚಾಲ್ತಿಯಲ್ಲಿರುತ್ತಾರೆ. ಅದರಲ್ಲೂ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಾವಳಿ ನಡೆದಾಗಲಂತೂ ಇವರ ಅಬ್ಬರ ಹೇಳತೀರದಾಗಿರುತ್ತದೆ. ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಬುಕ್ಕಿಗಳು ಯುವಕರನ್ನು ಗುರುತಿಸಿ ಹಣದ ಆಮಿಷ ಒಡ್ಡಿ ಬೆಟ್ಟಿಂಗ್ ಖೆಡ್ಡಾಕ್ಕೆ ಸಲೀಸಾಗಿ ಬೀಳಿಸಿಕೊಳ್ಳುತ್ತಿದ್ದಾರೆ.
ಬಹುಬೇಗ ಶ್ರೀಮಂತರಾಗೋಕೆ ಹೋದ್ರೆ ಮುಗೀತು ಕಥೆ..!
ಬೆಟ್ಟಿಂಗ್ ಭೂತಕ್ಕೆ ಸಿಲುಕಿ ಬದುಕನ್ನೇ ಹಾಳು ಮಾಡಿಕೊಳ್ಳೋರು ಬಹುತೇಕ ಯುವಕರು.. ಅದರಲ್ಲೂ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು.. ಹೊಟೇಲ್‌ಗಳಲ್ಲಿ, ಮಾಲ್‌ಗಳಲ್ಲಿ, ಶೋರೂಂ, ಶಾಪ್ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡೋ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೆ. ಇದು ಕೇವಲ ಸಿಟಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಯುವಕರು ಐಪಿಎಲ್ ಬೆಟ್ಟಿಂಗ್ ಮೋಹಕ್ಕೆ ಒಳಗಾಗಿದ್ದಾರೆ. ಬೆಟ್ಟಿಂಗ್ ಕಟ್ಟಲು ಸಾಲ ಮಾಡ್ತಿದ್ದಾರೆ. ಕಡಿಮೆ ಟೈಂಗೆ ಹೆಚ್ಚು ಹಣ ಮಾಡಬಹುದು ಅನ್ನೋ ದುರಾಸೆಯಿಂದ ಇದ್ದ ಹಣವನ್ನೂ ಕಳೆದುಕೊಂಡು ಸಾಲದ ಸುಳಿಗೆ ಸಿಲುಕ್ತಿದ್ದಾರೆ. ಆಗಾಗ ಗೆಲ್ಲೋದೂ ಉಂಟು.. ಗೆದ್ದ ಹಣದಲ್ಲಿ ಮೋಜು – ಮಸ್ತಿ ಮಾಡಿ ಸಂಭ್ರಮಿಸುವ ಯುವಕರು, ಸೋತಾಗ ಮಾತ್ರ ಊರು ಬಿಟ್ಟು ಓಡಿ ಹೋದ ಉದಾಹರಣೆಗಳೂ ಇವೆ. ಕೆಲವರು ಆತ್ಮಹತ್ಯೆಯಂಥ ದಾರಿಯನ್ನೂ ಹಿಡಿದಿದ್ದಾರೆ.
ವರ್ಷದಿಂದ ವರ್ಷಕ್ಕೆ ಹೆಚ್ತಾಗ್ತಿದೆ!
ಐಪಿಎಲ್ ಬೆಟ್ಟಿಂಗ್.. ಇದು ಸಾವಿರಾರು ಕೋಟಿ ರೂ. ವ್ಯವಹಾರ. ಬೆಟ್ಟಿಂಗ್‌ನ ಮೋಹಕ್ಕೆ ಸಿಲುಕಿ ಬದುಕನ್ನೇ ಹಾಳು ಮಾಡಿಕೊಳ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ತಾನೇ ಇದೆ. ಜೂಜಿನಲ್ಲಿ ಸೋತ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿವೆ. ಎಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆ ಕೂಡಾ ಇದೆ. ಅದರಲ್ಲೂ 16 ರಿಂದ 30 ವರ್ಷಗಳ ಒಳಗಿನ ಯುವಕರೇ ಈ ಬೆಟ್ಟಿಂಗ್ ಭೂತಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ.
ಪೋಷಕರೇ ನಿಮ್ಮ ಮಕ್ಕಳ ಮೇಲೆ ಇರಲಿ ಗಮನ!
ಬೆಟ್ಟಿಂಗ್‌ನಿಂದ ಯುವಕರನ್ನ ರಕ್ಷಣೆ ಮಾಡೋದು ಸುಲಭದ ವಿಚಾರವಲ್ಲ. ಯಾಕಂದ್ರೆ, ಈಗ ಇರುವ ಕಾನೂನಿನ ಅಡಿಯಲ್ಲಿ ಬೆಟ್ಟಿಂಗ್ ವಿರುದ್ಧ ಕ್ರಮ ಕೈಗೊಳ್ಳೋದು ಕಷ್ಟ. ಪೊಲೀಸರು ಒಂದಿಷ್ಟು ಕ್ರಮ ಕೈಗೊಂಡು ಕಟ್ಟು ನಿಟ್ಟಿನ ಎಚ್ಚರಿಕೆ ನೀಡ್ತಾರೆ ಅಷ್ಟೇ.. ಹೀಗಾಗಿ, ಬೆಟ್ಟಿಂಗ್ ದಂಧೆಗೆ ಬಲಿ ಆಗಬಾರದು ಅಂತಾ ನಾವೇ ನಮ್ಮ ಮೇಲೆ ನಿಯಂತ್ರಣ ಹೇರಿಕೊಳ್ಳಬೇಕು. ಎಲ್ಲಕ್ಕಿಂತಾ ಹೆಚ್ಚಾಗಿ ಈಸಿ ಮನಿ ಹಿಂದೆ ಬೀಳಬಾರದು. ಕಡಿಮೆ ಟೈಮಲ್ಲಿ ಹಣ ಮಾಡೋ ದುರಾಸೆಯಿಂದ ಬೆಟ್ಟಿಂಗ್ ಆಡೋಕೆ ಹೊರಟರೆ, ಇರೋ ಹಣವನ್ನೂ ಕಳೆದುಕೊಳ್ಳಬೇಕಾಗುತ್ತೆ. ಈ ವಿಚಾರದಲ್ಲಿ ಪೋಷಕರೂ ಕೂಡಾ ತಮ್ಮ ಮಕ್ಕಳ ಮೇಲೆ ಕಣ್ಣಿಟ್ಟಿರಬೇಕು. ಮಕ್ಕಳ ಹಣಕಾಸಿನ ಅಗತ್ಯತೆ, ಆತನ ಸ್ನೇಹಿತರ ಬಗ್ಗೆ, ಮಕ್ಕಳ ಪಠ್ಯೇತರ ಚಟುವಟಿಕೆ ಮೇಲೆ ನಿಗಾ ವಹಿಸಬೇಕು. ನೀವು ಇರುವ ಊರಿನಲ್ಲಿ ಯಾರಾದ್ರೂ ಬೆಟ್ಟಿಂಗ್ ನಡೆಸ್ತಿದ್ದಾರೆ ಅಂತಾ ಗೊತ್ತಾದ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಬೇಕು. ಇನ್ನು ಗ್ರಾಮಾಂತರ ಭಾಗದಲ್ಲಿ ಗ್ರಾಮ ಪಂಚಾಯ್ತಿಗಳು ಬೆಟ್ಟಿಂಗ್ ವಿಚಾರವಾಗಿ ಜನರಿಗೆ ಜಾಗೃತಿ ಮೂಡಿಸಬೇಕು. ಪೊಲೀಸರು ಹಾಗೂ ನ್ಯಾಯಾಲಯ ಕೂಡಾ ಬೆಟ್ಟಿಂಗ್ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಯುವಕರಿಗೆ ಭಯ ಮೂಡುತ್ತೆ.
ಹಳ್ಳಿ ಹಳ್ಳಿಯಲ್ಲೂ ಬೆಟ್ಟಿಂಗ್ ದಂಧೆ!
ಇದು ಕೇವಲ ಕರ್ನಾಟಕದ ಟ್ರೆಂಡ್ ಅಲ್ಲ. ಭಾರತ ದೇಶದ ಪ್ರತಿ ಹಳ್ಳಿಯಲ್ಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಟ್ಟಿಂಗ್ ದಂಧೆ ನಡೀತಿದೆ. ಅದರಲ್ಲೂ ಐಪಿಎಲ್ ಟೈಮಲ್ಲಿ 2 ತಿಂಗಳ ಕಾಲ ಬೆಟ್ಟಿಂಗ್ ಭರಾಟೆ ಜೋರಾಗಿರುತ್ತೆ. ಮೂಲಗಳ ಪ್ರಕಾರ, ಪ್ರತಿ ಗ್ರಾಮದಲ್ಲಿ 10 ರಿಂದ 30 ಯುವಕರು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರಂತೆ. ಇದಕ್ಕಾಗಿಯೇ ಹಣವನ್ನೂ ಸಂಗ್ರಹ ಮಾಡ್ತಾರಂತೆ. ಇದು ಹಲವು ವರ್ಷಗಳಿಂದ ನಡೆದು ಬರ್ತಿರುವ ಪರಿಪಾಠ. ಬೆಟ್ಟಿಂಗ್‌ನಿAದ ಹಣ ಕಳೆದುಕೊಳ್ಳೋರ ಸಂಖ್ಯೆ ಪ್ರತಿ ವರ್ಷ ಏರಿಕೆ ಆಗ್ತಾನೇ ಇದೆ. ಯುವಕರನ್ನೇ ಅವಲಂಬಿಸಿರುವ ಕುಟುಂಬಗಳ ಕಥೆಯಂತೂ ದೇವರೇ ಗತಿ.
ಐಪಿಎಲ್ ಆಟಗಾರರೇ ಬೆಟ್ಟಿಂಗ್‌ಗೆ ಬಲಿಯಾದರು!
ಬೆಟ್ಟಿಂಗ್ ಅನ್ನೋ ಮಾಯಾಜಾಲ ಯಾರನ್ನೂ ಬಿಟ್ಟಿಲ್ಲ. 2013ರಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣವೇ ಇದಕ್ಕೆ ಸಾಕ್ಷಿ. 2013ರ ಆವೃತ್ತಿಯಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ 2 ವರ್ಷ ಐಪಿಎಲ್‌ನಿಂದ ನಿಷೇಧ ಹೇರಲಾಗಿತ್ತು. ಈ ತಂಡಗಳ ಕೆಲವು ಆಟಗಾರರು ಹಾಗೂ ಮಾಲೀಕರಿಗೆ ಹಲವು ದಿನಗಳ ಜೈಲು ಶಿಕ್ಷೆಯೂ ಆಯ್ತು. ಇದು ಬೇರೆ ತಂಡಗಳಿಗೆ ಒಂದು ಕಠಿಣ ಎಚ್ಚರಿಕೆಯ ಸಂದೇಶವಲ್ಲದೆ ಇನ್ನೇನೂ ಅಲ್ಲ. ಇಷ್ಟೆಲ್ಲಾ ಆದ್ರೂ ಕೂಡಾ ಐಪಿಎಲ್ ಬೆಟ್ಟಿಂಗ್ ಇಂದಿಗೂ ನಡೆಯುತ್ತಿದೆ. ಶ್ರೀಮಂತ ಹಾಗೂ ಗಣ್ಯರು ಅನ್ನಿಸಿಕೊಂಡೋರೇ ಬೆಟ್ಟಿಂಗ್ ಭಾಗವಾಗಿ ಅದನ್ನು ಪೋಷಣೆ ಮಾಡ್ತಿರೋ ಆರೋಪಗಳಿವೆ.
ಬೆಟ್ಟಿಂಗ್ ವಿಚಾರದಲ್ಲಿ ಪೊಲೀಸರು ಹೇಳೋದೇನು?
ಕರ್ನಾಟಕದಲ್ಲಿ ಆನ್‌ಲೈನ್ ಬೆಟ್ಟಿಂಗ್‌ಗೆ ಕಡಿವಾಣ ಹಾಕೋದಕ್ಕಾಗಿ ಕರ್ನಾಟಕ ಪೊಲೀಸ್ ಕಾಯಿದೆ 1963ಕ್ಕೆ ತಿದ್ದುಪಡಿ ತರಲಾಯ್ತು. 2021ರಲ್ಲಿ ಆನ್‌ಲೈನ್ ಜೂಜು ನಿಷೇಧ ಕಾಯಿದೆಯನ್ನ ತರಲಾಗಿತ್ತು. ಈ ಕಾಯ್ದೆ ಪ್ರಕಾರ ಆನ್‌ಲೈನ್ ಜೂಜಾಡುವ ಅಪರಾಧವನ್ನು ಸಂಜ್ಞೇಯ ಅಥವಾ ಕಾಗ್ನಿಜೆಂಟ್ ಅಂತಾ ಪರಿಗಣಿಸಲಾಗಿತ್ತು. ಕೆ. ಪಿ. ಆಕ್ಟ್ 78ರ ಅನ್ವಯ ದಾಖಲಾದ ಪ್ರಕರಣದ ಆರೋಪಿಗಳಿಗೆ ಆನ್‌ಲೈನ್ ಜೂಜಿನಲ್ಲಿ ತೊಡಗಿದ್ದವರಿಗೆ ಗರಿಷ್ಠ 3 ವರ್ಷ ಜೈಲು, ಒಂದು ಲಕ್ಷ ರೂಪಾಯಿ ದಂಡ ವಿಧಿಸೋ ಅವಕಾಶ ಇತ್ತು. ಇನ್ನು ಕೆ.ಪಿ. ಆಕ್ಟ್ 87ರ ಅನ್ವಯ ದಾಖಲಾದ ಪ್ರಕರಣದಲ್ಲಿ 6 ತಿಂಗಳ ಜೈಲು, 10 ಸಾವಿರ ದಂಡದ ಶಿಕ್ಷೆಯಿತ್ತು. ಆದರೆ, ಆನ್‌ಲೈನ್ ಗೇಮ್ ಕಂಪನಿಗಳು ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ, ತಿದ್ದುಪಡಿ ರದ್ದುಪಡಿಸಿದ್ದ ಹೈಕೋರ್ಟ್, ಸಾಂವಿಧಾನಿಕ ನಿಯಮಗಳಿಗೆ ಅನುಸಾರವಾಗಿ ಹೊಸ ಕಾಯಿದೆ ತರಬಹುದು ಅಂತಾ ತೀರ್ಪಿನಲ್ಲಿ ತಿಳಿಸಿತ್ತು. ಆದರೆ, ರಾಜ್ಯ ಸರಕಾರ ಈ ವಿಚಾರದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಆದ್ರೂ ಕೂಡಾ ಆನ್‌ಲೈನ್ ಆಪ್‌ಗಳ ಮೂಲಕ ನಡೆಯುತ್ತಿರುವ ಬೆಟ್ಟಿಂಗ್ ಮೇಲೆ ನಿಗಾ ವಹಿಸಲಾಗಿದೆ. ಆರೋಪಿಗಳನ್ನೂ ಬಂಧಿಸಲಾಗುತ್ತಿದೆ.
