ಬೆಂಗಳೂರು:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ, ನಟ ದರ್ಶನ್ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ 132 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಅವರು ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಕೇಸ್‌ಗೆ ಸಂಬಂಧಿಸಿ ಹೊಸ ಸಾಕ್ಷ್ಯಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಇದರಿಂದ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ನಡೆದ ವಿಚಾರಣೆಗೆ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಇತರರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ನಡೆದ ದಿನ ಶೆಡ್ನಲ್ಲಿ ಕೆಲ ಆರೋಪಿಗಳ ಜತೆಗೆ ದರ್ಶನ್ ಫೋಟೊ ತೆಗೆಸಿಕೊಂಡಿದ್ದರು ಎನ್ನಲಾಗಿದೆ.ಇದೀಗ ಆ ಫೋಟೊವನ್ನು ರಿಟ್ರೀವ್ ಮಾಡಿರುವ ಪೊಲೀಸರು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನ್ ಜತೆ ಪುನೀತ್, ರವಿಶಂಕರ್, ಅನುಕುಮಾರ್, ಜಗದೀಶ್ ಫೋಟೋ ತೆಗೆಸಿಕೊಂಡಿದ್ದರು. ಆದರೆ ಆ ನಂತರ ಆ ಫೋಟೊ ಅನ್ನು ಡಿಲೀಟ್ ಮಾಡಲಾಗಿತ್ತು. ಪುನೀತ್ ಮೊಬೈಲ್ನಲ್ಲಿ ಆ ಫೋಟೊ ಇತ್ತು. ಪುನೀತ್ ಮೊಬೈಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದ ಪೊಲೀಸರು ಬಳಿಕ ಫೋಟೊ ರಿಟ್ರೀವ್ ಮಾಡಿದ್ದಾರೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ವೇಳೆ ಅವರ ಪರ ವಕೀಲರು, ಘಟನೆ ನಡೆದಾಗ ದರ್ಶನ್ ಸ್ಥಳದಲ್ಲಿ ಇರಲೇ ಇಲ್ಲ ಎಂಬಂತೆ ವಾದ ಮಂಡಿಸಿದ್ದರು. ಆದರೆ ಈಗ ಈ ಫೋಟೊ ಬಹಿರಂಗವಾದ ಬಳಿಕ ದರ್ಶನ್ ಸ್ಥಳದಲ್ಲಿ ಇದ್ದರು ಎಂಬುದಕ್ಕೆ ಇನ್ನಷ್ಟು ಪುಷ್ಟಿ ದೊರೆತಿದೆ. ಇದು ಮುಂದಿನ ದಿನಗಳಲ್ಲಿ ದರ್ಶನ್ಗೆ ಕಂಟಕವಾಗಿ ಪರಿಣಮಿಸಬಹುದು ಎನ್ನಲಾಗುತ್ತಿದೆ.
ಇದರ ನಡುವೆ ಕೃತ್ಯ ನಡೆದ ಬಳಿಕ ಪೊಲೀಸರು ಕೆಲ ಮೊಬೈಲ್, ವಾಹನಗಳು ಇನ್ನಿತರೆ ಕೆಲ ವಸ್ತುಗಳನ್ನು ಸೀಜ್ ಮಾಡಿದ್ದರು. ಅವುಗಳಲ್ಲಿ ಕೆಲವನ್ನು ಇದೀಗ ಮರಳಿಸಿದ್ದಾರೆ. ಕೆಲ ಕಾರುಗಳು, ಮೊಬೈಲ್ಗಳನ್ನು ಆರೋಪಿಗಳ ಮನವಿ ಮೇರೆಗೆ ಮರಳಲಿಸಲಾಗಿದೆ.








