ಬೆಂಗಳೂರು :
ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿ 130 ದಿನಗಳ ಮೇಲಾಗಿದ್ದವು. ಆ ಬಳಿಕ ಅವರು ಬೆನ್ನು ನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಆಸ್ಪತ್ರೆ ಸೇರಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ಈ ಕೇಸ್ನ ಕಾರಣದಿಂದ ಅವರು ಒಪ್ಪಿಕೊಂಡ ಸಿನಿಮಾಗಳು ಸಂಕಷ್ಟದಲ್ಲಿ ಇವೆ. ಇಂದು (ಡಿಸೆಂಬರ್ 13) ಅವರಿಗೆ ಪ್ರಮುಖ ದಿನ ಆಗಲಿದೆ. ದರ್ಶನ್ಗೆ ಜಾಮೀನು ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇದರ ಜೊತೆಗೆ ಸಿನಿ ಭವಿಷ್ಯವೂ ಇಂದೇ ನಿರ್ಧಾರ ಆಗಲಿದೆ.
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕಳೆದ ಕೆಲ ವಾರಗಳಿಂದ ನಡೆಯುತ್ತಿತ್ತು. ದರ್ಶನ್ ಪರವಾಗಿ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ಎಂದು ಹೇಳಿದ್ದಾರೆ. ಅತ್ತ, ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಅವರು ದರ್ಶನ್ ಅವರು ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.
ಸದ್ಯ ಕೋರ್ಟ್ ಎರಡೂ ಕಡೆಯ ವಾದವನ್ನು ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಇಂದು ಮಧ್ಯಾಹ್ನ 2:30ರ ಸುಮಾರಿಗೆ ತೀರ್ಪನ್ನು ನೀಡಲಿದೆ. ಸದ್ಯ ದರ್ಶನ್ ಅವರು ಆಸ್ಪತ್ರೆಯಿಂದಲೇ ಟೆನ್ಷನ್ನಲ್ಲಿ ಇದಕ್ಕಾಗಿ ಕಾಯುತ್ತಿದ್ದಾರೆ. ಇದು ದರ್ಶನ್ ಅವರ ಸಿನಿ ಭವಿಷ್ಯವನ್ನೂ ನಿರ್ಧರಿಸಲಿದೆ.
ದರ್ಶನ್ ಅಲ್ಲದೇ ಎ1 ಆರೋಪಿ ಪವಿತ್ರಾಗೌಡ, ಉಳಿದ ಆರೋಪಿಗಳಾದ ಲಕ್ಷ್ಮಣ್, ನಾಗರಾಜ್, ಅನುಕುಮಾರ್, ಜಗದೀಶ್, ಪ್ರದೂಷ್ ಜಾಮೀನು ತೀರ್ಪನ್ನು ಕೋರ್ಟ್ ಪ್ರಕಟಿಸಲಿದೆ. ಯಾರಿಗೆ ಜಾಮೀನು ಸಿಗುತ್ತದೆ, ಯಾರು ಮತ್ತೆ ಜೈಲುವಾಸ ಮುಂದುವರಿಸಬೇಕಾಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ.