ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು :

   ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಿತು. ಆದರೆ ಹೆಚ್ಚಿನ ವಾದ-ಪ್ರತಿವಾದಗಳು ಇಲ್ಲದೆಯೇ ಜಾಮೀನು ಅರ್ಜಿಯನ್ನು ನವೆಂಬರ್ 26 ಕ್ಕೆ ಮುಂದೂಡಲಾಯ್ತು. ಇಂದಿನ ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಅವರು ದರ್ಶನ್​ಗೆ ಮಧ್ಯಂತರ ಜಾಮೀನಿನ ನೀಡಿದ ವೇಳೆ ಸೂಚಿಸಲಾಗಿದ್ದ ಕೆಲ ನಿಯಮಗಳನ್ನು ಪಾಲಿಸಿಲ್ಲವೆಂದರು. ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

 
    ಅದೇ ವೇಳೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮತ್ತೊಂದು ವೈದ್ಯಕೀಯ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಕೆ ಮಾಡಿದರು. ಅದೇ ವೈದ್ಯಕೀಯ ವರದಿಯ ಪ್ರತಿಯನ್ನು ಎಸ್​ಪಿಪಿ ಪ್ರಸನ್ನ ಕುಮಾರ್ ಅವರಿಗೆ ನೀಡಲಾಯ್ತು. ವರದಿ ಪರಿಶೀಲಿಸಿ ಪ್ರತಿಕ್ರಿಯಿಸಲು ಸೂಚನೆ ನೀಡಿದ ನ್ಯಾಯಮೂರ್ತಿಗಳು ನವೆಂಬರ್ 26ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.
   ದರ್ಶನ್​ಗೆ ವೈದ್ಯಕೀಯ ಕಾರಣಗಳಿಗಾಗಿ ಆರು ವಾರಗಳ ಮಧ್ಯಂತರ ಜಾಮೀನನ್ನು ಹೈಕೋರ್ಟ್ ಈಗಾಗಲೇ ನೀಡಿದೆ. ಮೂರು ವಾರಗಳು ಈಗಾಗಲೇ ಕಳೆದು ಹೋಗಿವೆ. ಆದರೆ ದರ್ಶನ್​ಗೆ ಇನ್ನೂ ಯಾವುದೆ ಸರ್ಜರಿ ಮಾಡಲಾಗಿಲ್ಲ ಎನ್ನಲಾಗುತ್ತಿದೆ. ಇದರ ನಡುವೆ ಮಧ್ಯಂತರ ಜಾಮೀನು ರದ್ದತಿ ಕೋರಿ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸುವುದಾಗಿ ಪೊಲೀಸ್ ಇಲಾಖೆ ನಿರ್ಧಾರಿಸಿದ್ದು, ಇದನ್ನು ಗೃಹ ಸಚಿವ ಪರಮೇಶ್ವರ್ ಸಹ ಖಾತ್ರಿ ಪಡಿಸಿದ್ದಾರೆ. ದರ್ಶನ್​ಗೆ ಮಧ್ಯಂತರ ಜಾಮೀನು ಮಾತ್ರವೇ ದೊರೆತಿದ್ದು, ನಿಯಮಿತ ಜಾಮೀನು ಕೊಡಿಸುವ ಪ್ರಯತ್ನವನ್ನು ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಮಾಡುತ್ತಿದ್ದಾರೆ. ನವೆಂಬರ್ 26ಕ್ಕೆ ಅರ್ಜಿ ವಿಚಾರಣೆ ನಡೆಯಲಿದ್ದು, ಅಂದು ವಾದ ಏನಿರಲಿದೆ ಕಾದು ನೋಡಬೇಕಿದೆ. ನವೆಂಬರ್ 21ರಂದೇ ಪವಿತ್ರಾ ಗೌಡ, ಆರ್. ನಾಗರಾಜು, ಅನುಕುಮಾರ್, ಎಂ. ಲಕ್ಷ್ಮಣ್, ಜಗದೀಶ್ ಅವರ ಜಾಮೀನು ಅರ್ಜಿ ವಿಚಾರಣೆ ಸಹ ಇದೆ. ಅವರುಗಳ ಅರ್ಜಿ ವಿಚಾರಣೆ ಇಂದೇ ನಡೆಯಲಿದೆಯೇ ಅಥವಾ ಮುಂದಕ್ಕೆ ಹೋಗಲಿದೆಯೇ ಸುದ್ದಿ ಖಾತ್ರಿಯಿಲ್ಲ.
   ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ದರ್ಶನ್ ಬಂಧನವಾಗಿತ್ತು. ಐದು ತಿಂಗಳ ಕಾಲ ಜೈಲಿನಲ್ಲಿ ಕಳೆದ ದರ್ಶನ್​ಗೆ ಮೂರು ವಾರಗಳ ಹಿಂದಷ್ಟೆ ಮಧ್ಯಂತರ ಜಾಮೀನು ನೀಡಲಾಗಿದೆ. ಅನಾರೋಗ್ಯದ ಕಾರಣ ನೀಡಿ ದರ್ಶನ್ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap