ರಾಮನಗರ:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬಗ್ಗೆ ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ ನಡೆಯಿತು. ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿ ಭಾಷಣ ಮಾಡುತ್ತಿದ್ದ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ನಟ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋ ಪ್ರದರ್ಶಿಸಿ ಡಿ ಬಾಸ್, ಡಿ ಬಾಸ್ ಎಂದು ಕೂಗಲು ಆರಂಭಿಸಿದರು.
ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಅವರು ನನ್ನನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ, ಅವರು ನಾಳೆ(ಜುಲೈ 24) ನನ್ನನ್ನು ಭೇಟಿ ಮಾಡಿ ಮಾತನಾಡಲಿದ್ದು, ಎಲ್ಲ ವಿಚಾರ ತಿಳಿದುಕೊಳ್ಳುತ್ತೇನೆ, ಏನಾದರೂ ಅನ್ಯಾಯವಾಗಿದ್ದರೆ ಖಂಡಿತಾ ಸರಿಪಡಿಸಲು ಪ್ರಯತ್ನಿಸುವೆ ಎಂದರು. ಉಪ ಮುಖ್ಯಮಂತ್ರಿಗಳಿಂದ ಈ ಮಾತುಗಳನ್ನು ಕೇಳುತ್ತಿದ್ದಂತೆ ದರ್ಶನ್ ಅಭಿಮಾನಿಗಳಿಗೆ ಭಾರೀ ಖುಷಿಯಾಗಿದ್ದು, ಮತ್ತೆ ಮತ್ತೆ ಡಿ ಬಾಸ್ ಗೆ ಜೈ ಡಿ ಬಾಸ್ ಗೆ ಜೈ ಎಂದು ಜೈಕಾರ ಹಾಕಿದರು. ಡಿ ಕೆ ಶಿವಕುಮಾರ್ ಮಾತುಗಳನ್ನು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಾಕಿ ಸಂಭ್ರಮಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ಜೊತೆ ಮಾತನಾಡುತ್ತೇನೆ. ಆದರೆ ನಾವು ಕಾನೂನಿಗೆ ಗೌರವ ಕೊಡಬೇಕು. ನಾವೆಲ್ಲಾ ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಆಗಿದ್ದವರಿಗೆ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ. ನೊಂದ ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದರು.
