ಬೆಂಗಳೂರು:
ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಅವರು ಸೋಮವಾರ ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ. ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿರುವುದರಿಂದ ಒಂದೂವರೆ ತಿಂಗಳ ಬಳಿಕ ನಟ ಡಿಸ್ಚಾರ್ಜ್ ಆಗಿದ್ದು, ಪತ್ನಿ ವಿಜಯಲಕ್ಷ್ಮಿ ಅವರ ಹೊಸಕೆರೆಹಳ್ಳಿಯ ನಿವಾಸಕ್ಕೆ ದರ್ಶನ್ ಕಾರಿನಲ್ಲಿ ತೆರಳಿದ್ದಾರೆ.
ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಅವರು ದರ್ಶನ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಕರೆದೊಯ್ದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ತೀವ್ರ ಬೆನ್ನು ನೋವಿನ ಕಾರಣದಿಂದ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿತ್ತು. ನಟನಿಗೆ ಸರ್ಜರಿ ಮಾಡುವುದೋ ಅಥವಾ ಫಿಸಿಯೋ ಥೆರಪಿ ಮಾಡುವುದೋ ಎನ್ನುವ ಬಗ್ಗೆ ಸಾಕಷ್ಟು ಗೊಂದಲವಿತ್ತು. ಆದರೆ ಇತ್ತೀಚೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡುತ್ತಿದ್ದಂತೆ ನಟ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಟನಿಗೆ ಬಿಪಿ ಇದೆ, ಆರೋಗ್ಯ ಸ್ಥಿರತೆ ಇಲ್ಲ ಎಂದು ಸರ್ಜರಿ ಮುಂದೂಡಿಕೊಂಡು ಬರಲಾಗಿತ್ತು. ಈ ನಡುವೆ ಷರತ್ತುಬದ್ಧ ಜಾಮೀನು ಮಂಜೂರು ಆಗುತ್ತಲೇ, ಸರ್ಜರಿ ಮಾಡಿಸದೆಯೇ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ. ನಟ ಫಿಸಿಯೋಥೆರಪಿ ಮೂಲಕವೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗಿದ್ದು ಸರ್ಜರಿ ಮಾಡಿಸುವುದಿಲ್ಲ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ.13ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 7 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಪ್ರಕರಣದ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಜೈಲಿನಲ್ಲಿದ್ದ ದರ್ಶನ್‌ಗೆ ಬೆನ್ನು ನೋವಿನ ಹಿನ್ನೆಲೆ ಶಸ್ತ್ರಚಿಕಿತ್ಸೆಗಾಗಿ ಅ.30ರಂದು ಹೈಕೋರ್ಟ್ ಆರು ವಾರ ಕಾಲ ಮಧ್ಯಂತರ ಜಾಮೀನು ನೀಡಿತ್ತು. ಮಧ್ಯಂತರ ಜಾಮೀನು ಅವಧಿ ಮುಕ್ತಾಯಗೊಂಡರೂ ಶಸ್ತಚಿಕಿತ್ಸೆ ನಡೆದಿರಲಿಲ್ಲ. ರಕ್ತದೊತ್ತಡ ಹಿನ್ನೆಲೆಯಲ್ಲಿ ಪೂರಕ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಮತ್ತಷ್ಟು ದಿನ ಮಧ್ಯಂತರ ಜಾಮೀನು ಅವಧಿ ವಿಸ್ತರಿಸಬೇಕು ಎಂದು ವಕೀಲರು ಮನವಿ ಮಾಡಿದ್ದರು. ಇದರಿಂದ ಮಧ್ಯಂತರ ಜಾಮೀನು ಅವಧಿ ವಿಸ್ತರಿಸಿದ್ದ ಕೋರ್ಟ್, ಡಿ.13ರಂದು ದರ್ಶನ್ ಸೇರಿ 7 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.