ಬೆಂಗಳೂರು:
ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ ಸರ್ಜರಿಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಮಧ್ಯಂತರ ಜಾಮೀನು ಮುಕ್ತಾಯವಾಗುವ ದಿನವೇ ನಟನ ಶಸ್ತ್ರಚಿಕಿತ್ಸೆಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಮಾಡಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಆದೇಶ ಕಾಯ್ದಿರಿಸಿ, ಮುಂದಿನ ದಿನಾಂಕದವರೆಗೆ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿದೆ.
ರೆಗ್ಯುಲರ್ ಜಾಮೀನಿನ ಅರ್ಜಿಯ ಆದೇಶ ಬರುವವರೆಗೆ ದರ್ಶನ್‌ಗೆ ತಾಲ್ಕಾಲಿಕ ರಿಲೀಫ್ ಸಿಕ್ಕಿದೆ. ಸದ್ಯ ಮಧ್ಯಂತರ ಜಾಮೀನನ್ನು ಮುಂದುವರಿಸಲಾಗಿದೆ. ಡಿ. 11ಕ್ಕೆ ನಟ ದರ್ಶನ್ ಸರ್ಜರಿಗೆ ವೈದ್ಯರು ದಿನಾಂಕ ನಿಗದಿ ಮಾಡಿದ್ದಾರೆ. ರಕ್ತದೊತ್ತಡ ಹಿನ್ನೆಲೆಯಲ್ಲಿ ಇಷ್ಟು ದಿನ ಪೂರಕ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ದರ್ಶನ್ ಸರ್ಜರಿಗೆ ವೈದ್ಯರು ದಿನಾಂಕ ನಿಗದಿ ಮಾಡಿದ್ದಾರೆ ಎಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ನಟನಿಗೆ ರಕ್ತದ ಒತ್ತಡ ಕಡಿಮೆಯಾದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 6 ವಾರಗಳ ಮಧ್ಯಂತರ ಜಾಮೀನನ್ನು ನನ್ನ ಕಕ್ಷಿದಾರರು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿರುವ ವಕೀಲ ಸಿ.ವಿ.ನಾಗೇಶ್ ಅವರು, ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ವರದಿಯಲ್ಲಿ 14 ಗಾಯಗಳಿವೆ ಎಂದು ಹೇಳಲಾಗಿದೆ. ಆದರೆ, 1 ಗಾಯ ಬಿಟ್ಟರೆ ಬೇರೆಲ್ಲಾ ಬಾಸುಂಡೆಗಳಾಗಿವೆ. ಇನ್ನು ಸಾಕ್ಷಿಗಳ ಹೇಳಿಕೆ ಪಡೆಯಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು.