ಬೆಂಗಳೂರು :
ನಟ ದರ್ಶನ್ ಅವರು ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಜೈಲಿನ ಆವರಣದಲ್ಲಿ ಕಾಫಿ ಹೀರುತ್ತಾ, ಸಿಗರೇಟ್ ಸೇದುತ್ತಾ ಉಳಿದ ರೌಡಿ ಶೀಟರ್ಗಳ ಜೊತೆ ಕುಳಿತು ದರ್ಶನ್ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿತ್ತು. ಇದರ ಜೊತೆಗೆ ವಿಡಿಯೋ ಕಾಲ್ನಲ್ಲಿಯೂ ಅವರು ಮಾತನಾಡಿದ್ದರು. ಈಗ ದರ್ಶನ್ ಅವರನ್ನು ನಿಯಂತ್ರಣಕ್ಕೆ ತರಲು ಜೈಲಧಿಕಾರಿಗಳು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಚಿಂತನೆ ನಡೆದಿದೆ ಎನ್ನಲಾಗಿದೆ.
ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನಕ್ಕೆ ಒಳಗಾಗಿದ್ದಾರೆ. ಅವರು ಜೈಲಿನಲ್ಲಿ ಸೊರಗಿ ಹೋಗಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಅವರನ್ನು ನೋಡಿಬಂದ ಅನೇಕರು ಕಣ್ಣೀರು ಹಾಕಿದ್ದರು. ಇದೆಲ್ಲವೂ ಸುಳ್ಳು ಅನ್ನೋದು ಸ್ಪಷ್ಟವಾಗಿದೆ. ದರ್ಶನ್ ಜೈಲಿನಲ್ಲಿ ಹಾಯಾಗಿಯೇ ಇದ್ದಾರೆ. ದರ್ಶನ್ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ದರ್ಶನ್ ಹಾಗೂ ಅವರ ತಂಡವನ್ನು ಬೇರೆ ಜೈಲ್‌ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರೌಡಿ ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಕುಳಿತಿದ್ದಾರೆ. ದರ್ಶನ್ಗೆ ಈ ಎಲ್ಲಾ ವ್ಯವಸ್ಥೆಯನ್ನು ನಾಗನೇ ಮಾಡುತ್ತಿದ್ದಾನೆ ಎನ್ನಲಾಗಿದೆ. ಆತನಿಗೆ ಸಾಕಷ್ಟು ಕಾಂಟ್ಯಾಕ್ಟ್ ಇರುವುದರಿಂದ ದರ್ಶನ್ಗೆ ಸಹಾಯ ಮಾಡುತ್ತಿದ್ದಾನೆ. ಈ ಕಾರಣಕ್ಕೆ ರೌಡಿ ನಾಗನ ಟೀಂ ಅಥವಾ ದರ್ಶನ್ ಟೀಂ ಬದಲಾವಣೆಗೆ ಚಿಂತನೆ ನಡೆಸಲಾಗಿದೆ. ಇಂದು ಸಂಜೆ ವೇಳೆಗೆ ಬೇರೆ ಜೈಲ್‌ಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಚಿಂತಿಸಿದ್ದಾರಂತೆ.
ಈಗಾಗಲೇ ಈ ಪ್ರಕರಣದಲ್ಲಿ ಏಳು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಕೇಂದ್ರ ಗೃಹ ಸಚಿವ ಪರಮೇಶ್ವರ್ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಮೇಲಿನ ಅಧಿಕಾರಿಗಳ ಕೈವಾಡ ಕಂಡುಬಂದಲ್ಲಿ ಅವರನ್ನೂ ಅಮಾನತು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.