ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪನ್ನು ಸರ್ಕಾರ ಗೌರವಯುತವಾಗಿ ಸ್ವಾಗತಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪನ್ನು ನಾನು ಪ್ರಶ್ನಿಸುವುದಿಲ್ಲ, ನ್ಯಾಯಾಲಯದ ತೀರ್ಪನ್ನು ಸರಕಾರ ಗೌರವಯುತವಾಗಿ ಸ್ವಾಗತಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್‌ಗೆ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ಹೈಕೋರ್ಟ್ ಆರು ವಾರಗಳ ಅವಧಿಗೆ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
47 ವರ್ಷದ ದರ್ಶನ್ ಅವರನ್ನು ಜೂನ್ 11 ರಂದು ಬಂಧಿಸಲಾಗಿದ್ದು, ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿದೆ. ಪ್ರಕರಣದಲ್ಲಿ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಸೇರಿ 15 ಮಂದಿ ಸಹ ಆರೋಪಿಗಳಾಗಿದ್ದಾರೆ. ಪವಿತ್ರಾ ಗೌಡ ಬೆಂಗಳೂರಿನ ಜೈಲಿನಲ್ಲಿ ಮತ್ತು ಇತರರು ರಾಜ್ಯದ ವಿವಿಧ ಜೈಲುಗಳಲ್ಲಿದ್ದಾರೆ, ಅವರಲ್ಲಿ ಕೆಲವರು ಇತ್ತೀಚೆಗೆ ಜಾಮೀನು ಪಡೆದಿದ್ದಾರೆ.