ಮೈಸೂರು
ದಸರಾದಲ್ಲಿ ಅಭಿಮನ್ಯು ಈ ಬಾರಿ ಅಂಬಾರಿ ಹೊರುವ ಆನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆ ದಿನಕ್ಕೆ ಸಜ್ಜಾಗುವ ಮೊದಲು ಅನೇಕ ರೀತಿಯ ತಯಾರಿಗಳು ಇರುತ್ತವೆ. ಅದರಲ್ಲಿ ಆನೆಗಳನ್ನು ಕಂಟ್ರೋಲ್ ಮಾಡಲು, ಅಂಬಾರಿ ಕಟ್ಟಲು ವಿಶೇಷವಾದ ಹಗ್ಗದ ತಯಾರಿಯೂ ಕೂಡ ಬಹಳ ಮುಖ್ಯವಾಗುತ್ತದೆ. ದಸರಾ ಆರಂಭವಾಗುವುದಕ್ಕೂ ಮೊದಲು ಸಿಬಂದಿ ವರ್ಗದವರು ತಮ್ಮ ಬಿಡುವಿನ ವೇಳೆಯಲ್ಲಿ ಈ ಹಗ್ಗವನ್ನು ತಯಾರಿಸುತ್ತಾರೆ.
ಮೊದಲು ಸೆಣಬಿನ ಮರದ ಕಡ್ಡಿಗಳನ್ನು ತೆಗೆದು ಅದನ್ನು ನೀರಿನಲ್ಲಿ ಹಾಕಿ ಇಡಲಾಗುತ್ತದೆ. ಇದು ಸರಿಸುಮಾರು ಒಂದು ವಾರಗಳ ಕಾಲ ನೀರಿನಲ್ಲಿ ಚೆನ್ನಾಗಿ ನೆನೆದಿರುತ್ತದೆ. ಬಳಿಕ ಈ ಸೆಣಬಿನ ಕಡ್ಡಿಗಳು ಕೊಳೆತು ಒಂದು ಹದಕ್ಕೆ ಬಂದಿರುತ್ತದೆ. ನಂತರ ಇದನ್ನು ಚೆನ್ನಾಗಿ ಬಡಿಯಲಾಗುತ್ತದೆ. ಆಗ ಕಡ್ಡಿಯಲ್ಲಿರುವ ಬೇರೆ ಅಂಶಗಳು ಹೋಗಿ ಒಂದು ನಾರಿನ ರೀತಿಯ ಬಳ್ಳಿ ಸಿಗುತ್ತದೆ. ಇದನ್ನು ಒಂದು ಎರಡಲ್ಲ ಇಂತಹ ನೂರಾರು ಬಳ್ಳಿಗಳನ್ನು ಒಂದುಗೂಡಿಸಿ ಒಂದು ಬಿಗಿಯಾದ ಹಗ್ಗವನ್ನು ತಯಾರಿಸಲಾಗುತ್ತದೆ.
ಅಂಬಾರಿ ಕಟ್ಟುವಾಗ ಈ ಹಗ್ಗವನ್ನು ಬಳಸಲಾಗುತ್ತದೆ. ಇದಕ್ಕಾಗಿ ಬೇರೆ ಯಾವ ಹಗ್ಗವನ್ನು ತರುವುದಿಲ್ಲ. ಈ ಸೆಣಬಿನ ದಾರವನ್ನು ಸರಿಯಾಗಿ ಎಲ್ಲಿಯೂ ಗಂಟು ಬರದಿರುವಂತೆ ನೋಡಿಕೊಂಡು ಅದನ್ನು ಹಣೆಯಲಾಗುತ್ತದೆ. ಒಮ್ಮೆ ಹಣೆದ ಹಗ್ಗವನ್ನು, ಇನ್ನೊಂದು ಅದೇ ರೀತಿಯಲ್ಲಿ ನೈಯ್ದ ಹಗ್ಗದ ಜೊತೆಯಲ್ಲಿ ಹಣೆದು ದಪ್ಪ ಮಾಡುತ್ತಾರೆ. ಬಟ್ಟೆಯ ಹಗ್ಗ ಅಥವಾ ನೈಲಾನ್ ಹೀಗೆ ನಾನಾ ರೀತಿಯ ಹಗ್ಗಕ್ಕಿಂತ ಇದು ಗಟ್ಟಿಯಾಗಿರುತ್ತದೆ.