ಜಂಬೂ ಸವಾರಿಯೊಂದಿಗೆ ಮೈಸೂರು ದಸರಾ ಸಂಪನ್ನ…..!

ಮೈಸೂರು:

    ನಾಡಹಬ್ಬ ಮೈಸೂರು ದಸರಾಗೆ ಜಗತ್ ಪ್ರಸಿದ್ಧ ಆಕರ್ಷಣೆ ಜಂಬೂ ಸವಾರಿಯೊಂದಿಗೆ ನಿನ್ನೆ ರಾತ್ರಿ ತೆರೆ ಬಿದ್ದಿದೆ. ನವರಾತ್ರಿ ಸಂಭ್ರಮ, ಸಡಗರಗಳೊಂದಿಗೆ ಸಂಪನ್ನವಾಗಿದೆ. ಅಭಿಮನ್ಯು ಆನೆಯು ಅರಮನೆ ಬಳಿಯಿಂದ ಚಿನ್ನದ ಅಂಬಾರಿಯನ್ನು ಹೊತ್ತು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಿತು. ದೇಶವಿದೇಶಗಳಿಂದ ಆಗಮಿಸಿದ ಪ್ರವಸಿಗರು ಈ ಮೆರವಣಿಗೆಯನ್ನು ಕಣ್ತಂಬಿಕೊಂಡರು. ವಿದ್ಯುದ್ದೀಪಗಳ ಅಲಂಕಾರದಿಂದ ಮೈಸೂರು ಇಂದ್ರನಗರಿಯಂತೆ ಕಂಗೊಳಿಸಿತು.

   ಸಂಜೆ 4.42ರಿಂದ 5.06 ವರೆಗಿನ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ, ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ತಾಯಿಗೆ ಸಿಎಂ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭಗೊಂಡಿತು. ಜಂಬೂ ಸವಾರಿಗೆ ಚಾಲನೆ ನೀಡಿದ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಂಸದ ಯದುವೀರ್ ಒಡೆಯರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

   6ನೇ ಬಾರಿಗೆ ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನು ಹೊತ್ತಿದ್ದು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದ್ದು ಈ ಬಾರಿಯ ಮೈಸೂರು ದಸರಾ ಉತ್ಸವದ ವಿಶೇಷವಾಗಿತ್ತು. ಇದಕ್ಕೂ ಮೊದಲು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು. ಇನ್ನು ಜಂಬೂ ಸವಾರಿಯ ಜೊತೆಗೆ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. 58 ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಸಾಗಿದ್ದು, 31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯಗಳನ್ನು ಪ್ರದರ್ಶಿಸಿದ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆದವು.

   ಈ ನಡುವೆ ಜಂಬೂ ಸವಾರಿ ನೋಡಲು ಜನರ ಕಾತರದಿಂದ ನೂಕಾಟ, ತಳ್ಳಾಟ ನಡೆಯಿತು. ಜಂಬೂ ಸವಾರಿ ನೋಡಲು ಜನ ದಾರಿಯುದ್ದಕ್ಕೂ ಕಾದು ಕುಳಿತಿದ್ದು, ಈ ನಡುವೆ ನೂಕಾಟ, ತಳ್ಳಾಟಕ್ಕೆ ಮಹಿಳೆಯೋರ್ವಳು ಕುಸಿದು ಬಿದ್ದರು. ಹೆಚ್ಚಿನ ಜನದಟ್ಟಣೆಯಿಂದ ಉಸಿರಾಟದ ತೊಂದರೆ ಎದುರಿಸಿದ್ದು, ತಕ್ಷಣ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಸಯ್ಯಾಜಿ ರಾವ್ ರಸ್ತೆಯಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಜಂಬೂ ಸವಾರಿ ಬರುವ ವೇಳೆ ಘಟನೆ ನಡೆದಿದೆ.

Recent Articles

spot_img

Related Stories

Share via
Copy link