ಚಿಕ್ಕಮಗಳೂರು:
ಶ್ರೀರಾಮಸೇನೆಯು ನ. 4ರಿಂದ 10ರ ವರೆಗೆ ದತ್ತಪೀಠದಲ್ಲಿ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು ನ. 10ರಂದು ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನ. 9ರಂದು ಬೆಳಗ್ಗೆ 6 ಗಂಟೆಯಿಂದ ನ. 11ರ ಬೆಳಗ್ಗೆ 6ರ ವರೆಗೆ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಪ್ರಾಂತ್ಯದ ಪ್ರಸಿದ್ಧ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್ ಸ್ವಾಮಿ ದರ್ಗಾ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಪ್ರವಾಸಿಗರ ಆಗಮನವನ್ನು ನಿರ್ಬಂಧಿಸಲಾಗಿದೆ.
21ನೇ ವಾರ್ಷಿಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಶ್ರೀಗುರು ದತ್ತಾತ್ರೇಯರ ಭಕ್ತರು ಮಾಲೆ ಧರಿಸಿ, ಏಳು ದಿನಗಳ ಕಾಲ ವ್ರತಾಚರಣೆಯಲ್ಲಿರುತ್ತಾರೆ. ನವೆಂಬರ್ 10ರಂದು ದತ್ತಪೀಠದಲ್ಲಿ ವಿಶೇಷ ಹೋಮ-ಹವನ ನಡೆಸಲಿದ್ದಾರೆ.
ಈ ಬಾರಿ ದತ್ತ ಮಾಲಾ ಅಭಿಯಾನದಲ್ಲಿ ಬಿಜೆಪಿ ನಾಯಕರು ಸಹ ಭಾಗವಹಿಸಲಿದ್ದಾರೆ. ಈ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇದೇ ಮೊದಲ ಬಾರಿಗೆ ಬಿಜೆಪಿ ನಾಯಕರಿಗೆ ಆಹ್ವಾನ ನೀಡಲಾಗಿದೆ. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಸಿಟಿ ರವಿ, ಮಾಧವಿ ಲತಾ ಸೇರಿದಂತೆ ಅನೇಕ ಮುಖಂಡರು ನವೆಂಬರ್10 ರಂದು ಚಿಕ್ಕಮಗಳೂರು ನಗರದಲ್ಲಿ ನಡೆಯುವ ಧರ್ಮ ಸಭೆ, ಶೋಭಾಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಏಳು ದಿನಗಳ ಕಾಲ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಿದ್ದು, ವಿವಾದಾತ್ಮಕ ಘೋಷಣೆ ಕೂಗದಂತೆ ಜಿಲ್ಲಾಡಳಿತ ಹಿಂದೂ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದೆ.