ದಾವಣಗೆರೆ:
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಸಂಭ್ರಮ, ಪಾಲಕರ ಮೊಗದಲ್ಲಿ ಸಂತಸ, ದಾವಣಗೆರೆ ವಿವಿಯ ಜ್ಞಾನಸೌಧದ ಆವರಣದ ಎಲ್ಲೆಡೆ ಹರ್ಷದ ವಾತಾವರಣ. ಗಾಂಭೀರ‌್ಯದ ರಾಜಪಾಲರ ನೋಟ, ಶಿಕ್ಷಣ ಸಚಿವ ಹಾಗೂ ಸಮಕುಲಾಧಿಪತಿ ಡಾ.ಎಂ.ಸಿ.ಸುಧಾಕರ್ ಅವರ ಉಪಸ್ಥಿತಿ, ಪೊಲೀಸ್ ಬಿಗಿ ಬಂದೋಬಸ್ತ್, ನಿಗದಿತ ಸಮಯದಲ್ಲಿ ಕಾರ್ಯಕ್ರಮ ಆರಂಭ ಮತ್ತು ಮುಕ್ತಾಯ.
ಇದು ಬುಧವಾರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿನ ಹೈಲೈಟ್ಸ್‌ಗಳು. ವಿಶ್ವ ವಿದ್ಯಾಲಯದ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿವಿಯ ಅರ್ಹ ಪದವಿ ಪಡೆದ ವಿದ್ಯಾರ್ಥಿಗಳಿಗೆ 87 ಚಿನ್ನದ ಪಕದಗಳನ್ನು ಪ್ರದಾನ ಮಾಡಿದರು.
ಇದರಲ್ಲಿ ಸ್ನಾತಕೋತ್ತರ ಪದವಿಯಲ್ಲಿ (ವಾಣಿಜ್ಯ ಶಾಸ್ತ್ರ) ಐ.ಕೆ.ರಿಯಾ 6 ಚಿನ್ನದ ಪದಕಗಳನ್ನು ಅಂದರೆ ಸಿಂಹಪಾಲನ್ನು ವಿವಿಯ ಚಿನ್ನದ ಪದಕ ಪಡೆದು ಬೀಗಿದರೆ, ಸ್ನಾತಕ ಪದವಿಯಲ್ಲಿ ದಾವಣಗೆರೆ ಎವಿಕೆ ಕಾಲೇಜಿನ ರಕ್ಷಾ ವಿ.ಅಂಗಡಿ (ಬಿಎಸ್ಸಿ), ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್.ಗಂಗಮ್ಮ (ಬಿ.ಎ), ಚಿತ್ರದುರ್ಗ ಎಸ್.ಆರ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಎನ್.ಪಿ.ಭವ್ಯಶ್ರೀ (ಶಿಕ್ಷಣ) ಅವರು ತಲಾ ಮೂರು ಪದಕ ಪಡೆದು ಸಂಭ್ರಮಿಸಿದರು.ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರವಿಭಾಗದ ಆರ್.ಟಿ. ಶಶ್ವತ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಎಸ್.ಜಿ. ಸೌಂದರ್ಯ ತಲಾ ನಾಲ್ಕು ಚಿನ್ನದ ಪದಕ ಪಡೆದು ಬೀಗಿದರು.
ಕೆ.ಸ್ನೇಹಾ (ಇಂಗ್ಲಿಷ್), ಸಿ.ಎನ್. ಅಕ್ಷತಾ (ಕನ್ನಡ), ವರ್ಷಾ ಸಣ್ಣಪ್ಪನವರ (ಜೀವರಸಾಯನ ವಿಜ್ಞಾನ), ಡಿ.ಶ್ರೀಕಾಂತ ಅಂಗಡಿ (ರಸಾಯನಶಾಸ್ತ್ರ), ಗೌರಿ ಮಣ್ಣೂರ (ಗಣಿತಶಾಸ್ತ್ರ), ಎಚ್. ಮೇಘನಾ (ಭೌತಶಾಸ್ತ್ರ), ಕೆ.ಸಿಂಧು (ಜೀವಶಾಸ್ತ್ರ) ಅವರು ತಲಾ ಮೂರು ಚಿನ್ನದ ಪದಕ ಪಡೆದರೆ, ಆರ್.ಲಕ್ಷ್ಮಣ (ಪತ್ರಿಕೋದ್ಯಮ), ಸಿ.ಗುರುಪ್ರಸಾದ (ಬಿವಿಎ), ಎವಿಕೆ ಕಾಲೇಜಿನ ಖುಷಿ ಕೋಥಾರಿ (ಬಿಕಾಂ), ಚಿತ್ರದುರ್ಗ ಎಸ್‌ಆರ್‌ಎಸ್ ಶಿಕ್ಷಣ ಕಾಲೇಜಿನ ಇ.ಚೈತ್ರಾ (ಶಿಕ್ಷಣ), ಆರ್.ಅಂಜು (ಎಂ.ಪಿಇಡಿ), ಎನ್.ಎನ್.ಯಶ್ವಂತೆ (ಜೈವಿಕ ತಂತ್ರಜ್ಞಾನ), ಎ.ಪ್ರೀತಿ (ಸಸ್ಯಶಾಸ್ತ್ರ), ಶರ್ಮೀಳಾ (ಕಂಪ್ಯೂಟರ್ ವಿಜ್ಞಾನ), ರುಚಿತಾ ಪಾಟೀಲ (ಸೂಕ್ಷ್ಮಜೀವ ವಿಜ್ಞಾನ), ಬಾಪೂಜಿ ಹೈಟೆಕ್ ಕಾಲೇಜಿನ ಎಚ್.ಟಿ. ಶ್ರವಣಕುಮಾರಿ (ಬಿಸಿಎ) ಅವರು ತಲಾ ಎರಡು ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲರು 36 ಪುರುಷರು, 21 ಮಹಿಳೆಯರು ಒಟ್ಟು 57 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಿದರು.
