ಮಕ್ಕಳಲ್ಲಿ ಮಾಹಿತಿ ತುಂಬುವುದೇ ಜ್ಞಾನವಲ್ಲ

ದಾವಣಗೆರೆ:

      ಮಕ್ಕಳಲ್ಲಿ ಕೇವಲ ಮಾಹಿತಿ ತುಂಬುವುದೇ ಜ್ಞಾನವಲ್ಲ ಎಂದು ಮೈಸೂರಿನ ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.

      ನಗರದ ಬಾಪೂಜಿ ಸಭಾಂಗಣದಲ್ಲಿ ಶುಕ್ರವಾರ ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 7ನೇ ವರ್ಷದ ವಿದ್ಯಾರ್ಥಿ ವೇತನ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿಪದಕ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಶಾಲಾ-ಕಾಲೇಜಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೇವಲ ಮಾಹಿತಿ ತುಂಬಲಾಗುತ್ತಿದ್ದು, ಮಾಹಿತಿ ತುಂಬುವುದೇ ಜ್ಞಾನವಲ್ಲ. ಆದರೆ, ಸಂಗ್ರಹವಾದ ಮಾಹಿತಿಯನ್ನು ಅನುಭಾವಕ್ಕೆ ತಂದುಕೊಳ್ಳುವುದೇ ಜ್ಞಾನವಾಗಿದೆ ಎಂದು ಹೇಳಿದರು.

       ಪ್ರಸ್ತುತ ಶಿಕ್ಷಕರು ಕೊಡಬಹುದಾದ ಮಾಹಿತಿ ಅಂಗೈಯಲ್ಲಿಯೇ ದೊರೆಯುತ್ತಿದೆ. ಹೀಗಾಗಿ ಸಮಾಜದಲ್ಲಿ ಅಧ್ಯಾಪಕರು, ಶಿಕ್ಷಕರ ಬಗ್ಗೆ ಇದ್ದ ಗೌರವ ಕಡಿಮೆಯಾಗುತ್ತಿದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಮಾಹಿತಿಯ ಸಂಗ್ರಹದ ಜೊತೆಗೆ ಜ್ಞಾನದ ದರುಶನವೂ ಮಾಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಅಧ್ಯಾಪಕರು ಹೆಚ್ಚಿನ ಅಧ್ಯಯನದಲ್ಲಿ ತೊಡಗುವ ಮೂಲಕ ಸಜ್ಜಾಗಬೇಕೆಂದು ಸಲಹೆ ನೀಡಿದರು.

      ಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಆದ್ದರಿಂದ ಜೀವನದಲ್ಲಿ ಜ್ಞಾನ ಬಹುಮುಖ್ಯವಾಗಿದೆ. ಆಸ್ತಿ-ಅಂತಸ್ತನ್ನು ಎಲ್ಲರೂ ಸಂಪಾದಿಸಬಹುದು. ಆದರೆ, ಜ್ಞಾನ ಸಂಪಾದಿಸುವುದು ಕಷ್ಟ. ಆದ್ದರಿಂದ ಜ್ಞಾನದ ದೇಶ, ಸಮಾಜ ಇನ್ನೂ ವಿಕಾಸವಾಗಿಲ್ಲ. ಆದ್ದರಿಂದ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಜ್ಞಾನದ ಬೀಜ ಬಿತ್ತುವ ಮೂಲಕ ದೇಶದ ವಿಕಾಸಕ್ಕೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.

       ಹಿಂದೆ ಕೆಲ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಅಷ್ಟು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ, ಇಂದು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿಯಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಕಾರಣದಿಂದ ಹಗಲು ರಾತ್ರಿ ಸರತಿ ಸಾಲಿನಲ್ಲಿ ನಿಂತು ಶಾಲಾ ಕಾಲೇಜುಗಳಿಗೆ ಸೇರಿಸಲು ಮುಂದಾಗಿದ್ದಾರೆ ಎಂದ ಅವರು, ಇತ್ತೀಚಿನ ತಂತ್ರಜ್ಞಾನದ ಬೆಳವಣಿಗೆಯಿಂದ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ಸರ್ವೇಯೊಂದರ ಪ್ರಕಾರ ಎಸ್.ಎಸ್.ಎಲ್.ಸಿ.ಯಲ್ಲಿ ಓದುತ್ತಿರುವ ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಕೂಡಿಸುವುದು, ಕಳೆಯುವುದು, ಗುಣಿಸುವುದು, ಭಾಗಿಸುವ ಲೆಕ್ಕ ಸಹ ಗೊತ್ತಿಲ್ಲ. ಆದರೆ ಶೇ. 95 ರಷ್ಟು ಮಕ್ಕಳಿಗೆ ಮೊಬೈಲ್ ಬಳಸಲು ಬರುತ್ತೆ. ಅದರೆ, ಮೊಬೈಲ್ ಆಪರೇಟ್ ಮಾಡುವುದೇ ಜ್ಞಾನವಲ್ಲ. ಅದೊಂದು ಮಾಹಿತಿ ಸಂಗ್ರಹ ಎಂಬುದನ್ನು ಅರಿತುಕೊಂಡು ವಿದ್ಯಾರ್ಥಿಗಳು ಉತ್ತಮ ಅಭ್ಯಾಸದತ್ತ ಗಮನ ಹರಿಸಬೇಕು ಎಂದರು.

        ಡಾ.ಶಾಮನೂರು ಶಿವಶಂಕರಪ್ಪ ಅವರು ಶಾಲಾ-ಕಾಲೇಜು ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಕೋಟ್ಯಾಂತರ ರೂಗಳನ್ನು ಬ್ಯಾಂಕಿನಲ್ಲಿ ಇಟ್ಟು, ಸ್ಕಾಲರ್‍ಸಿಪ್ ನೀಡುವುದರ ಮೂಲಕ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಫೇಲಾದ ವಿದ್ಯಾರ್ಥಿಗಳಿಗೂ ಉತ್ತಮ ಮಾರ್ಗದರ್ಶನ, ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು ಎಂದರು.

        ಎಸ್‍ಎಸ್ ಜನಕಲ್ಯಾಣ ಟ್ರಸ್ಟ್‍ನ ಸಂಸ್ಥಾಪಕ, ಬಾಪೂಜಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಜ್ಯದ ಎಲ್ಲಾ ಸಮಾಜದ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಪತ್ರಕರ್ತರ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಕಳೆದ 7 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದಕ್ಕಾಗಿ ಆರೂವರೆ ಕೋಟಿ ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದ್ದು, ಇದರಿಂದ ಬರುವ ಬಡ್ಡಿಯ ಹಣದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

       ಟ್ರಸ್ಟ್‍ನ ಕಾರ್ಯದರ್ಶಿ ಅಥಣಿ ವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 7 ವರ್ಷಗಳಲ್ಲಿ ಟ್ರಸ್ಟ್‍ನಿಂದ 6,992 ವಿದ್ಯಾರ್ಥಿಗಳಿಗೆ ಒಟ್ಟು 3.15 ಕೋಟಿ ರೂ.ಗಳ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

     ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ವಿತರಿಸಲಾಯಿತು. ಸಮಾರಂಭದಲ್ಲಿ ಡಾ.ಹೆಚ್.ಗುರುಪಾದಪ್ಪ, ಪ್ರೊ.ವೈ.ವೃಷಬೇಂದ್ರಪ್ಪ, ಪ್ರಾಂಶುಪಾಲ ಬಿ.ಎಸ್.ರೆಡ್ಡಿ, ಎಂ.ಜಿ.ಈಶ್ವರಪ್ಪ, ಅಣಬೇರು ರಾಜಣ್ಣ, ಡಾ.ಮುರುಗೇಶ್, ಎಂ.ಜಿ.ರಾಜಶೇಖರಪ್ಪ, ಇಮಾಮ್ ಮೇಸ್ಟ್ರು, ಡಾ.ಬಿ.ಈರಪ್ಪ, ಪ್ರೊ.ವೀರೇಶ್, ಡಿ.ಡಿ.ಪಿ.ಐ ಪರಮೇಶ್ವರಪ್ಪ, ಬಿಇಓ ಪುಷ್ಪಲತಾ ಸೇರಿದಂತೆ ಮತ್ತಿತರರು ಇದ್ದರು

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link