ದಾವಣಗೆರೆ:
ರಫೇಲ್ ಯುದ್ದ ವಿಮಾನ ಹಗರಣ ಪ್ರಕರಣದ ತನಿಖೆಯನ್ನು ಸರ್ವ ಪಕ್ಷೀಯ ಜಂಟಿ ಸಂಸದೀಯ ಸಮಿತಿಗೆ ವಹಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ಷಣೆಯ ದೃಷ್ಟಿಯಿಂದ ನೌಕ ಪಡೆಯು 126 ಯುದ್ಧ ವಿಮಾನಗಳಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಬೇಡಿಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಡಬ್ಬಲ್ ಇಂಜೆನ್ ಇರುವ ಯುದ್ಧ ವಿಮಾನ ಒಂದಕ್ಕೆ 526 ಕೋಟಿ ರೂ. ಒಂದರಂತೆ ಖರೀದಿಗೆ ಹೆಚ್‍ಎಎಲ್ ಮೂಲಕ ಫ್ರಾನ್ಸ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು .
ಆದರೆ, ಬಳಿಕ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೋದಿ ಸ್ನೇಹಿತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ 1,670 ಕೋಟಿಗೆ ಒಂದರಂತೆ 36 ಯುದ್ಧ ವಿಮಾನಗಳನ್ನು ಖರೀದಿಸುವ ಮೂಲಕ ಸುಮಾರು 41 ಸಾವಿರ ಕೋಟಿ ರೂ. ಅವ್ಯವಹಾರ ನಡೆಸಿದ್ದು, ಇದರ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಬೇಕೆಂದು ಒತ್ತಾಯಿಸಿದರು.
ಯುಪಿಎ ಸರ್ಕಾರವು ಫ್ರಾನ್ಸ್ ಕಂಪೆನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದಂತೆ ಆ ಕಂಪೆನಿಯು 18 ಯುದ್ಧ ವಿಮಾನಗಳನ್ನು ಭಾರತದ ನೌಕ ಪಡೆಗೆ ಪೂರೈಸಬೇಕು ಹಾಗೂ ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ಇನ್ನೂ 108 ಯುದ್ದ ವಿಮಾನಗಳನ್ನು ತಯಾರಿಸಲು ಹೆಚ್‍ಎಎಲ್‍ಗೆ ಬಿಡಿಭಾಗಗಳನ್ನು ಪೂರೈಸಬೇಕಿತ್ತು. ಆದರೆ, ಇದ್ಯಾವುದನ್ನು ಲೆಕ್ಕಿಸದ ಮೋದಿ ಸರ್ಕಾರವು 50ರಿಂದ 60 ಸಾವಿರ ತಾಂತ್ರಿಕ ಸಿಬ್ಬಂದಿಗಳು ಕೆಲಸ ಮಾಡುತ್ತಿರುವ, 3,921 ವಿಮಾನಗಳನ್ನು ಹಾಗೂ 4,625 ಎಂಜಿನ್‍ಗಳನ್ನು ಉತ್ಪಾದಿಸಿ, ಸುಮಾರು 78 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಹೆಚ್‍ಎಎಲ್ ಸಂಸ್ಥೆಗೆ ಯುದ್ದ ವಿಮಾನ ತಯಾರಿಸುವ ಸಾಮಥ್ರ್ಯ ಇಲ್ಲ ಎಂಬ ನೆಪ ಹೇಳಿ, ಕೇವಲ 30 ದಿನಗಳ ಹಿಂದಷ್ಟೆ ಆರಂಭವಾಗಿದ್ದ, ಒಂದು ಸೈಕಲ್ ಸಹ ಉತ್ಪಾದಿಸದ ಅನಿಲ್ ಅಂಬಾನಿ ಅವರ ಕಂಪೆನಿಗೆ 1,670 ಕೋಟಿ ರೂ.ಗೆ ಒಂದರಂತೆ ಯುದ್ದ ವಿಮಾನ ಖರೀದಿಗೆ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಈ ರಫೇಲ್ ಹಗರಣ ಶತಮಾನದ ಅತೀ ದೊಡ್ಡ ಹಗರಣವಾಗಿದೆ. ಈ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಿಲ್ಲ. ಇದನ್ನು ಗಮನಿಸಿದರೆ, ಭ್ರಷ್ಟರ ಜೊತೆ ಮೋದಿಯೂ ಪಾಲುದಾರರಾಗಿದ್ದಾರೆಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ದೂರಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬದುಕಿದ್ದಾಗ, ತಿರುಗಿ ನೋಡದ ಬಿಜೆಪಿಯವರು ಈಗ ಅವರು ಸತ್ತ ಮೇಲೆ ಅಟಲ್ ಅಜೇಯ ಎನ್ನುವ ಮೂಲಕ ಮತ ಸೆಳೆಯಲು ನೋಡುತ್ತಿದ್ದಾರೆ ಎಂದು ಆಪಾದಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಲಿಯಾಕತ್ ಅಲಿ, ಅಬ್ದುಲ್ ಜಬ್ಬಾರ್, ಹರೀಶ್, ಬಿ.ವಿನಾಯಕ, ಡಿ.ಶಿವಕುಮಾರ್, ರಮೇಶ್ ಫಾರೂಕ್ ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ