ದಾವಣಗೆರೆ :
ಇಲ್ಲಿನ ವಿನೋಬನಗರದಲ್ಲಿ ಶ್ರೀವೀರ ವರಸಿದ್ದಿ ವಿನಾಯಕ ಸೇವಾ ಸಮಿತಿಯು ಪ್ರತಿಷ್ಠಾಪಿಸಿದ್ದ 26ನೇ ವರ್ಷದ ಗಣಪತಿ ಮೂರ್ತಿಯ ವಿಸರ್ಜನೆಯ ಬೃಹತ್ ಮೆರವಣಿಗೆಯು ಯಾವುದೇ ಅಹಿತಕರ ಘಟನೆ ಸಂಭವಿಸದೇ, ಮುಕ್ತಾಯವಾಗಿ ನೋಡುಗರ ಕಣ್ಮನ ಸೆಳೆಯಿತು.
ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಗಣಪತಿಗೆ ಅಂತಿಮ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಗಣಪತಿ ವಿಸರ್ಜನೆಯ ಮೆರವಣಿಗೆಗೆ ಚಾಲನೆ ನೀಡಿದರು.
ಇಲ್ಲಿನ ವಿನೋಬ ನಗರದ 2ನೇ ಮುಖ್ಯ ರಸ್ತೆಯಿಂದ ಆರಂಭವಾದ ಮೆರವಣಿಗೆಯು ಮಸೀದಿ ಮುಖಾಂತರ ಪಿಬಿ ರಸ್ತೆ, ಅರುಣಾ ವೃತ್ತ, ರಾಮ್ ಅಂಡ್ ಕೋ ವೃತ್ತ, ಎಂ.ಸಿ ಕಾಲೋನಿ ಎ ಬ್ಲಾಕ್ ಮುಖಾಂತರ ಮರಳಿ ವಿನೋಬ ನಗರದ 1ನೇ ಮುಖ್ಯ ರಸ್ತೆಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಮುಂದೆ ಸಾಗಿ, ಪಿಬಿ ರಸ್ತೆಗೆ ತಲುಪಿ ಕಾಡಪ್ಪನ ಕಣದಲ್ಲಿರುವ ಬಾವಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.
2ನೇ ಮುಖ್ಯ ರಸ್ತೆಯಲ್ಲಿರುವ ಮಸೀದಿ ಬಳಿ ಗಣಪತಿ ಬರುತ್ತಿದ್ದಂತೆ ಯುವಕರ ಗುಂಪು ಡಿಜೆಯಿಂದ ಹೊರಹೊಮ್ಮುತ್ತಿದ್ದ ಹಾಡಿಗೆ ಹುಚ್ಚೆದ್ದು ಕುಣಿದರು. ಮಸೀದಿಯ ಎದರು ಯಾವದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗೃತವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದ ಯುವಕರನ್ನು ಮುಂದು ಸಾಗಿಸಲು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಅವರಿಂದ ಹಿಡಿದು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯುವಕರನ್ನು ಮುಂದೆ ಕಳುಹಿಸಲು ಹರಸಾಹಸಪಟ್ಟರು.
ಮಸೀದಿ ಬಳಿ ಏನಾದರೂ ಅಹಿತಕರ ಘಟನೆ ಸಂಭವಿಸಿದರೆ, ಅದನ್ನು ಸುಲಭವಾಗಿ ಪತ್ತೆಯಾಗುವಂತೆ ಅನುಕೂಲ ಆಗಲೆಂಬ ಕಾರಣಕ್ಕೆ ಇಲ್ಲಿ ಸುಮಾರು 20 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೆ, ಡ್ರೋಣ್ ಕ್ಯಾಮೆರಾದ ಮೂಲಕವೂ ಹದ್ದಿನ ಕಣ್ಣು ಇಡಲಾಗಿತ್ತು. ಇದಷ್ಟೆಯಲ್ಲದೇ ಹತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಹ್ಯಾಂಡಿ ಕ್ಯಾಮ್‍ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು.
ಮೆರವಣಿಗೆಯಲ್ಲಿ ಹಲವರು ಕೇಸರಿ ಬಣ್ಣದ ರುಮಾಲು ಧರಿಸಿ, ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು. ಡೊಳ್ಳು ಕುಣಿತ, ವೀರಗಾಸೆ, ನಾಸಿಕ್ ಡೋಲು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿತ್ತು. ಅದರಲ್ಲೂ ಆನೆ ಸಾಗುತ್ತಿದ್ದ ಬೀದಿಗಳಲ್ಲಿ ಹೆಚ್ಚಿನ ಮಹಿಳೆಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಇನ್ನು ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ ಸ್ಥಾಪಕ ಎಂ.ಪಿ. ಸಿದ್ದಾರ್ಥ ಭಾವಚಿತ್ರಗಳು, ಬೃಹತ್ ಓಂಕಾರದ ಚಿಹ್ನೆ ಮೆರವಣಿಗೆಯಲ್ಲಿ ಗಮನ ಸೆಳೆಯುತ್ತಿತ್ತು. ಕಟ್ಟಡಗಳ ಮೇಲೆ, ಮನೆಯ ಮಹಡಿಗಳಲ್ಲಿ, ಅಂಗಡಿ-ಮುಂಗಟ್ಟುಗಳ ಮುಂದೆ ನಿಂತು ಸಾವಿರಾರು ಜನರು ವೀಕ್ಷಿಸುತ್ತಿದ್ದು, ಕುಣಿಯುತ್ತಿದ್ದ ಯುವಕರಿಗೆ ಪುಷ್ಪಾರ್ಚನೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ