ದಾವಣಗೆರೆ:
ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಭೊಂಸ್ಲೇ ಅವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಬೆಂಗಳೂರಿನ ಗವಿಪುರಂ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀಮಂಜುನಾಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಶ್ರೀಶಹಾಜಿ ರಾಜೇ ಬೊಂಸ್ಲೆ ರವರ 355 ನೇ ಪುಣ್ಯರಾಧನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮರಾಠ ಸಮಾಜದಲ್ಲಿ ಹುಟ್ಟಿದ್ದ ಶಹಾಜಿ ರಾಜೇ ಬೊಂಸ್ಲೆ ಕೇವಲ ಒಂದು ಜಾತಿಗೆ ಸೀಮಿತರಾಗದೇ, ಇಡೀ ಹಿಂದೂ ಸಮಾಜದ ರಕ್ಷಕರಾಗಿ ಹೋರಾಟ ಮಾಡಿದ್ದಾರೆ. ಆದ್ದರಿಂದ ಇಲ್ಲಿರುವ ಶಹಾಜಿ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ಧಿ ಪಡೆಸಲು ಸಮಾಜ ಬಾಂಧವರು ಸರ್ಕಾರದ ಮೇಲೆ ಒತ್ತಡ ಏರಲು ಸಂಘಟಿತ ಹೋರಾಟ ನಡೆಸಬೇಕೆಂದು ಒತ್ತಾಯಿಸಿದರು.
ಶಹಾಜಿ ಮಹಾರಾಜರು ಮತ್ತು ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅಂತವರ ಸ್ಮಾರಕಗಳು ನಿರ್ಮಾಣ ಆಗುವಂತೆ ನೋಡಿಕೊಳ್ಳುವುದರ ಜೊತೆಗೆ ಸಮಾಜವನ್ನು ಸಂಘಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಶಹಾಜಿ ಮಹಾರಾಜರ ಸಮಾಧಿ ಸ್ಥಳವಿದ್ದರೂ, ಸರಿಯಾಗಿ ಯಾವುದೇ ಸೌಲಭ್ಯಗಳಿಲ್ಲ, ಇದನ್ನು ಅಭಿವೃದ್ಧಿ ಪಡಿಸುವ ಮೂಲಕ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಸರ್ಕಾರ ಸಿದ್ಧತೆ ನಡೆಸಬೇಕೆಂದು ಒತ್ತಾಯಿಸಿದರು.
ಮರಾಠ ಸಮಾಜ ಬಾಂಧವರು ಸಾಮಾಜಿಕ, ಆರ್ಥಿಕ, ಶೈಕ್ಷಣಿವಾಗಿ ಮುಂದುವರೆಯಬೇಕಾದರೆ ಸಮಾಜದ ಸಂಘಟನೆಯ ಮುಖಂಡರುಗಳ ಮನಸ್ಸುಗಳು ಸರಿಯಾಗಿರುಬೇಕು. ಅದಕ್ಕೆ ಪೂರಕವಾಗಿ ಶಿವಾಜಿ ಮಹಾರಾಜರು, ಶಹಾಜಿ ರಾಜೇ ಬೊಂಸ್ಲೆಯವರ ಮಾರ್ಗದರ್ಶನದಲ್ಲಿ ಯುವಕರು ಸಂಘಟಿತರಾಗಬೇಕೆಂದು ಕರೆ ನೀಡಿದರು.
ಶಹಾಜಿ ರಾಜೇ ಬೊಂಸ್ಲೆ ಸ್ಮಾರಕ ಮತ್ತು ಅಭಿವೃದ್ಧಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ವೈ.ಮಲ್ಲೇಶ್, ವಿಠ್ಠಲ್ ರಾವ್ ಗಾಯಕ್ವಾಡ್, ಸುರೇಶ್ ಕಾಟೆ, ಮಾರುತಿರಾವ್ ಮೊಳೆ, ಯಶವಂತರಾವ್ ಜಾಧವ್, ಮಾಲತೇಶ ಜಾಧವ್, ಶಾಮಸುಂದರ್, ಶ್ರೀಕಾಂತ್ ಚೌವ್ಹಾಣ್, ನಟ ಗಣೇಶ್, ಕುಬೆಂದ್ರೋಜಿರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








