ಅಪಪ್ರಚಾರಕ್ಕೆ ಒತ್ತು ನೀಡುತ್ತಿರುವ ಮಾಧ್ಯಮ

  ದಾವಣಗೆರೆ:

      ಮಾಧ್ಯಮಗಳು ಅಪಪ್ರಚಾರಕ್ಕೆ ಮೊದಲ ಆದ್ಯತೆ ನೀಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಹಾರನಹಳ್ಳಿ ಸುಕ್ಷೇತ್ರದ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

      ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿರುವ ಸುವರ್ಣಸೌಧದಲ್ಲಿ ಸೋಮವಾರ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

      ಪ್ರಜಾಪ್ರಭುತ್ವದ ನಾಲ್ಕನೇ ರಂಗವಾಗಿರುವ ಮಾಧ್ಯಮ ರಂಗ ಸಮಾಚಾರ, ವಿಚಾರ, ಪ್ರಚಾರಗಳಿಗೆ ಮೊದಲ ಆದ್ಯತೆ ನೀಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಈ ಮೂರಕ್ಕಿಂತ ಅಪಪ್ರಚಾರಕ್ಕೆ ಪ್ರಮುಖ ಆದ್ಯತೆ ನೀಡುವ ಮೂಲಕ ವ್ಯಕ್ತಿಗಳ ತೆಜೋವಧೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

       ಒಬ್ಬ ಪತ್ರಕರ್ತ ಎಲ್ಲ ವಿಚಾರಗಳ ಅರಿವು, ಜ್ಞಾನ ಹೊಂದುವ ಮೂಲಕ ಸತ್ಯ ಶೋಧನೆಯನ್ನೇ ಗುರಿಯಾಗಿಸಿಕೊಳ್ಳುವುದರ ಜೊತೆಗೆ ಶ್ರೇಷ್ಠ ವೃತ್ತಿಪರರಾಗಬೇಕು. ಜ್ಞಾನ, ಚಿಂತನೆಗಳ ಮೂಲಕ ಸಮಾಜದ ಶ್ರೇಯಸ್ಸಿಗೆ ದುಡಿಯಬೇಕು. ಆಗ ಸಮಾಜ ನಿಮಗೆ ಋಣಿಯಾಗಿರುತ್ತದೆ. ಕೋಪ, ನೋಡುವ ದೃಷ್ಟಿಕೋನ ಹಾಗೂ ಮನಸ್ಸುಗಳು ಸಮಾಜದ ಹಿತಕ್ಕಾಗಿ ಇರಬೇಕೇ ಹೊರತು, ಇನ್ನೊಬ್ಬರ ಕಾಲೆಳೆಯಲು ಇರಕೂಡದು ಎಂಬುದನ್ನು ಪ್ರತಿಯೊಬ್ಬ ಪತ್ರಕರ್ತರು ಅರಿಯಬೇಕೆಂದು ಸಲಹೆ ನೀಡಿದರು. 

      ಸಮಾಜದ ಪ್ರಗತಿಗೆ ಪತ್ರಕರ್ತ ಚಿಂತನೆಗೆ ಒಳಗಾಗಬೇಕು. ತಾನು ಬಳಸುವ ಲೇಖನಿ ಒಳ್ಳೆಯ ಕೆಲಸಕ್ಕೆ ಎಂಬ ಬದ್ಧತೆ ಇರಬೇಕು. ಅದಕ್ಕೆ ಆತ ಧ್ಯಾನಮಗ್ನನಾಗಬೇಕಿದೆ. ದ್ವೇಷ, ಜಾತಿ, ಪಂಥ ದೂರವಿಟ್ಟು ಏಕಪಥದತ್ತ ಸಾಗುವ ಮೂಲಕ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಬೇಕೆಂದು ಕಿವಿಮಾತು ಹೇಳಿದರು.

      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಹಿಂದಿನ ಕಾಲದಲ್ಲಿ ಪತ್ರಿಕೆ ಹೊರತರುವುದು ಕಷ್ಟದ ಕೆಲಸವಾಗಿತ್ತು. ಆದರೆ, ಇಂದಿನ ತಾಂತ್ರಿಕ ಯುಗದಲ್ಲಿ ಪತ್ರಿಕೆಗಳು ಬಹಷ್ಟು ಬದಲಾವಣೆ ಆಗಿವೆ. ಇಂದು ಟಿ.ವಿ. ಮಾಧ್ಯಮಗಳು ಪ್ರಸಿದ್ದಿ ಪಡೆದಿವೆ ಎಂದರು.

      ಯಾರನ್ನಾದರೂ ಹೋಗಳಿ, ಮೇಲ್ಮಟ್ಟಕ್ಕೆ ಬೆಳೆಯುವಂತೆ ಹಾಗೂ ಯಾರನ್ನಾದರೂ ತೆಗಳಿ ಪಾತಳಕ್ಕೆ ತಳ್ಳುವಂತಹ ಶಕ್ತಿ ಪತ್ರಿಕಾ ರಂಗಕ್ಕಿದೆ. ಆದ್ದರಿಂದ ಪತ್ರಕರ್ತರು ಅನವಶ್ಯಕವಾಗಿ ಯಾರನ್ನೂ ಗುರಿ ಮಾಡಿ ತೆಜೋವಧೆ ಮಾಡುವ ಕಾರ್ಯಕ್ಕೆ ಕೈ ಹಾಕಬಾರದು ಎಂದು ಸಲಹೆ ನೀಡಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿ ಸುಳ್ಳು, ಅಸತ್ಯದ ಸುದ್ದಿಗಳನ್ನು ಮಾಧ್ಯಮದ ಮೂಲಕ ಹರಡಬಾರದು. ಒಳ್ಳೆಯ ಸುದ್ದಿಗಳನ್ನು ನೀಡಬೇಕು. ಮುದ್ರಣ ಮತ್ತು ಟಿವಿ ಮಾಧ್ಯಮಗಳು ಗುಣಾತ್ಮಕ ಹಾಗೂ ಸರಿ ದಾರಿಯಲ್ಲಿ ಸಮಾಜವನ್ನು ಕೊಂಡೊಯ್ಯುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

      ಉದ್ಯಮಿ ಅಥಣಿ ಎಸ್. ವೀರಣ್ಣ ಮಾತನಾಡಿ, ಡಾ. ಶಾಮನೂರು ಶಿವಶಂಕರಪ್ಪನವರು ಪತ್ರಕರ್ತರು ಮತ್ತು ಛಾಯಾಗ್ರಾಹಕರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎಸ್.ಎಸ್.ಜನ ಕಲ್ಯಾಣ ಟ್ರಸ್ಟ್ ಆರಂಭಿಸಿ, ಟ್ರಸ್ಟ್ ಹೆಸರಿನಲ್ಲಿ ಠೇವಣಿ ಇಟ್ಟಿರುವ ಹಣದಲ್ಲಿ ಬರುವ ಬಡ್ಡಿಯ ದುಡ್ಡಿನಲ್ಲಿ ವಿದ್ಯಾರ್ಥಿ ವೇತನ ನಿಡುತ್ತಿದ್ದಾರೆ. ಆದರೆ, ಇದನ್ನು ಪಡೆಯಲು ಕೆಲವರು ದಾಖಲಾತಿಗಳನ್ನು ತಿದ್ದಿ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಸರಿಯಾದ ಕ್ರಮವಲ್ಲ. ಏಕೆಂದರೆ, ನಿಜವಾದ ಪತ್ರಕರ್ತರ ಮಕ್ಕಳಿಗೆ ಸೌಲಭ್ಯ ಸಿಗಬೇಕೆಂಬುದೇ ಟ್ರಸ್ಟ್‍ನ ಆಶಯವಾಗಿದೆ ಎಂದರು.

      ಪತ್ರಕರ್ತ ಬಸವರಾಜ ದೊಡ್ಡಮನಿ ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳು ಹೆಚ್ಚು ಅಭಿವೃದ್ಧಿಯಾಗಿರುವ ಕಾರಣ ನಾಗರೀಕ ಪತ್ರಿಕೋಧ್ಯಮ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಇಂದು ಎಲ್ಲೋ ನಡೆದಿರುವ ಘಟನೆಯನ್ನು ನಾಗರೀಕರೆ ಮೊಬೈಲ್‍ಗಳಲ್ಲಿ ಸೆರೆ ಹಿಡಿಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ನಾಡುವ ಮೂಲಕ ಬೆಳಕಿಗೆ ತರುತ್ತಿದ್ದಾರೆ. ಹೀಗಾಗಿ ನಾಗರೀಕರು ಪತ್ರಕರ್ತರ ನಡೆಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ ಪತ್ರಕರ್ತರು ಎಚ್ಚರ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.

     ಇಂದು ಜಾತಿ, ಧರ್ಮ, ಹಣಗಳಿಕೆಯ ಕಾರಣಕ್ಕೆ ಇಂದು ಬಹುತೇಕ ಪತ್ರಕರ್ತರು ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ. ಪತ್ರಿಕಾ ರಂಗ ಮುಂದೊಂದು ದಿನ ದಾರಿ ತಪ್ಪಬಹುದೆಂಬ ಕಾರಣಕ್ಕಾಗಿಯೇ ಸಂವಿಧಾನ ರಚನಾಕಾರರು ಪತ್ರಕರ್ತರಿಗೆ ಯಾವುದೇ ಅಧಿಕಾರ ನೀಡಲ್ಲ ಎಂದು ಸೂಚ್ಯವಾಗಿ ನುಡಿದರು.

      ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಮಾತನಾಡಿ, ಇಂದಿನ ಪತ್ರಕರ್ತರು ಕೇವಲ ಪತ್ರಿಕಾಗೋಷ್ಠಿ, ಸಮಾರಂಭದ ಸುದ್ದಿ ಬರೆಯಲಷ್ಟೇ ಸೀಮಿತವಾಗಿರುವ ಕಾರಣಕ್ಕೆ ತನಿಖಾ ಪತ್ರಿಕೋಧ್ಯಮ ಕಣ್ಮರೆಯಾಗಿದೆ. ಅಲ್ಲದೇ, ಸ್ಥಳೀಯ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಬಾ.ಮ.ಬಸವರಾಜಯ್ಯ, ಅನಸೂಯಮ್ಮ, ಸಿಟಿ ಮಜ್ಜಿಗೆ, ಶಿವರಣಪ್ಪ, ಹಳೇಬಿಡು ಪ್ರಸಾದ್, ಬಸವರಾಜಯ್ಯ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

      ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಭಾವಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದಗಂಗಾ ವಿದ್ಯಾಸಂಸ್ಥೆಯ ಎನ್.ಶಿವಣ್ಣ, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಇ.ಎಂ. ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

      ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಬಿ. ಅನುಸೂಯಮ್ಮ, ಬಾ.ಮ. ಬಸವರಾಜಯ್ಯ, ಎಂ.ಎಸ್. ಶಿವಶರಣಪ್ಪ, ವಿ. ಬಸವರಾಜಯ್ಯ, ಸಿ.ಟಿ. ಮಜ್ಜಗಿ, ಹಳೇಬಿಡು ರಾಮಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.ಸಿದ್ದಗಂಗಾ ಶಾಲಾ ಮಕ್ಕಳು ನಾಡಗೀತೆ ಹೇಳಿದರು. ಶ್ರೀನಿವಾಸ ಹೊನ್ನಾಳಿ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link