ದಂಗೆ ಏಳುವ ಹೇಳಿಕೆ ವಾಪಾಸ್ ಪಡೆಯಿರಿ

ದಾವಣಗೆರೆ:

        ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದಂಗೆ ಏಳುವಂತೆ ಕರೆ ನೀಡಿರುವ ಹೇಳಿಕೆಯನ್ನು ತಕ್ಷಣವೇ ವಾಪಾಸ್ ಪಡೆಯಬೇಕು. ಇಲ್ಲದಿದ್ದರೆ, ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಎಚ್ಚರಿಕೆ ನೀಡಿದ್ದಾರೆ.

       ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಹೆಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ವಿರುದ್ಧ ದಂಗೆ ಏಳುವಂತೆ ಕರೆ ನೀಡಿರುವುದಲ್ಲದೇ, ನನ್ನ ಕೈಯಲ್ಲಿ ಸರ್ಕಾರವಿದೆ ನಾನು ಮನಸ್ಸು ಮಾಡಿದರೆ ಏನುಬೇಕಾದರು ಮಾಡಬಲ್ಲೆ ಎಂಬುದಾಗಿ ಹೇಳಿಕೆ ನೀಡಿರುವುದರ ತಪ್ಪೊಪ್ಪಿಕೊಂಡು, ತಕ್ಷಣವೇ ಆ ಹೇಳಿಕೆಗಳನ್ನು ತಕ್ಷಣವೇ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.

        ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುವ ಭಯದಿಂದ, ಯಡಿಯೂರಪ್ಪನವರ ವಿರುದ್ಧ ದಂಗೆ ಏಳುವಂತೆ ಕರೆ ನೀಡಿ, ರಾಜ್ಯದಲ್ಲಿ ಕೆಟ್ಟ ವಾತಾವರಣ ಸೃಷ್ಟಿ ಮಾಡುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ದ್ವೇಷ, ರಾಗ, ಅಸೂಯೆ ಬಿಟ್ಟು ಅಧಿಕಾರ ನಡೆಸುವುದಾಗಿ ಪ್ರತಿಜ್ಞೆ ಮಾಡಿರುತ್ತಾರೆ. ಆದರೆ, ಈಗ ಅದನ್ನು ಮರೆತು ಇಂಥಹ ಹೇಳಿಕೆ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಮಾರಸ್ವಾಮಿ ಅವರ ಅಪ್ಪನ ಆಣೆಗೂ ಅಧಿಕಾರಕ್ಕೆ ಬರಲ್ಲ ಅಂತಿದ್ದರು. ಇದಕ್ಕೆ ಪ್ರತಿಯಾಗಿ ಹೆಚ್‍ಡಿಕೆ ನಮ್ಮ ಅಪ್ಪನ ಆಣೆ ಏಕೆ ಇಡುತ್ತೀರಿ ಬೇಕಾದರೆ, ನಿಮ್ಮ ಅಪ್ಪನ ಆಣೆ ಇಟ್ಟುಕೊಳ್ಳಿ ಎಂದಿದ್ದರು. ಹೀಗೆ ಪರಸ್ಪರ ಕಚ್ಚಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕೆ ಮಾತ್ರ ಅಪವಿತ್ರ ಮಾಡಿಕೊಂಡಿದ್ದಾರೆಂದು ಮಾರ್ಮಿಕವಾಗಿ ನುಡಿದರು.

      ಇತ್ತೀಚೆಗೆ ಕಾಂಗ್ರೆಸ್‍ನವರೇ ಆಗಿರುವ ಮಾಜಿ ಸಚಿವ ಎ.ಮಂಜುರವರು ಹೆಚ್‍ಡಿಕೆ ಸೋದರ ಹೆಚ್.ಡಿ.ರೇವಣ್ಣನವರ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದರು. ಅದಲ್ಲದೇ, ಧರ್ಮಸ್ಥಳದಲ್ಲಿ ಮಾಜಿ ಸಿದ್ದರಾಮಯ್ಯನವರು ಈ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಬಾಳಲ್ಲ ಎಂದಿದ್ದರು. ಸರ್ಕಾರದ ಭಾಗವೇ ಆಗಿರುವ ಜಾರಕಿಹೊಳಿ ಸಹೋದರರು ಸರ್ಕಾರದ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದರು. ಆಗ ಏನೂ ಮಾತನಾಡದ ಕುಮಾರಸ್ವಾಮಿ, ಈಗ ಬಿಜೆಪಿಯವರು ಹಣ ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ನಡೆಸುತ್ತಿದ್ದಾರೆಂಬ ಅಪಪ್ರಚಾರ ಮಾಡುತ್ತಿರುವುದಲ್ಲದೇ, ಬಿಎಸ್‍ವೈ ವಿರುದ್ಧ ದಂಗೆ ಏಳುವ ಹೇಳಿಕೆ ನೀಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

        ಹೆಚ್.ಡಿ.ದೇವೇಗೌಡ ಮತ್ತು ಅವರ ಮಕ್ಕಳು ರಾಮಕೃಷ್ಣ ಹೆಗಡೆಯವರನ್ನು ಹೆದರಿಸಿ ಅಧಿಕಾರ ಪಡೆದಿದ್ದರು. ಹೀಗೆ ಯಡಿಯೂರಪ್ಪನವರನ್ನು ಹೆದರಿಸಿ, ಬೆದರಿಸಿ, ಬಾಯಿ ಮುಚ್ಚಿಸಿ ಅಧಿಕಾರ ಪಡೆಯುತ್ತೇವೆ ಎನ್ನುವುದು ಅವರ ಭ್ರಮೆ ಅಷ್ಟೆ ಎಂದು ಹೇಳಿದರು.

        ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಬಿ.ರಮೇಶ ನಾಯ್ಕ, ಎನ್.ರಾಜಶೇಖರ್, ಖಜಾಂಚಿ ಹೇಮಂತಕುಮಾರ್, ವೈದ್ಯಕೀಯ ಪ್ರಕೋಷ್ಠಕದ ಡಾ.ಮಂಜುನಾಥಗೌಡ, ಮುಖಂಡರುಗಳಾದ ಪ್ರಭು ಕಲ್ಬುಗಿ, ಮುಕುಂದಪ್ಪ, ಶಿವಕುಮಾರಸ್ವಾಮಿ, ಉಜ್ಜಿನಪ್ಪ, ಆನಂದ ಶಿಂಧೆ, ಅಕ್ಕಿ ರಾಮಚಂದ್ರ, ಉಮೇಶ್ ಪಾಟೀಲ್, ಮಜೀದ್ ಮತ್ತಿತರರು ಹಾಜರಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap