ದುಬೈ:
ಆಸ್ಟ್ರೇಲಿಯಾದ ಡೇವಿಡ್ ಬೂನ್ ಅವರು ಬುಧವಾರ ಮುಕ್ತಾಯ ಕಂಡಿದ್ದ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಮ್ಯಾಚ್ ರೆಫರಿ ಹುದ್ದೆಗೆ ನಿವೃತ್ತಿ ಘೋಷಿಸಿದರು. ಈ ಮೂಲಕ 14 ವರ್ಷದ ಮ್ಯಾಚ್ ರೆಫರಿ ಕರ್ತವ್ಯಕ್ಕೆ ತೆರೆ ಎಳೆದರು. 64 ವರ್ಷದ ಬೂನ್ 389 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಆಸ್ಟ್ರೇಲಿಯಾ ಮಾಜಿ ಆರಂಭಿಕ ಆಟಗಾರ ಡೇವಿಡ್ ಬೂನ್ ಆಸೀಸ್ ಪರ 12 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು. ಈ ಅವಧಿಯಲ್ಲಿ ಅವರು 26 ಶತಕಗಳು ಸೇರಿದಂತೆ 13,386 ರನ್ ಗಳಿಸಿದ್ದಾರೆ. 1989 ರಲ್ಲಿ ಪರ್ತ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಮತ್ತು ಬ್ಲಾಕ್‌ಕ್ಯಾಪ್ಸ್ ವಿರುದ್ಧದ ಪಂದ್ಯಗಳಲ್ಲಿ ಮೂರು ಶತಕಗಳು ಅವರ ವೃತ್ತಿಜೀವನದ ಪ್ರಮುಖ ಅಂಶಗಳಾಗಿವೆ.
ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯೂ ಇವರ ಪಾಲಿಗಿದೆ. 11 ವರ್ಷಗಳ ಕಾಲ ರಾಷ್ಟ್ರೀಯ ಆಯ್ಕೆದಾರರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಅವರು ಮತ್ತೆ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯನ್ನು ಸೇರಲಿದ್ದಾರೆ.
“ಐಸಿಸಿಯೊಂದಿಗೆ ದೀರ್ಘ ಕಾಲ ಮ್ಯಾಚ್ ರೆಫರಿಯಾಗಿ ಕರ್ತವ್ಯ ನಿರ್ವಹಿಸಲು ಅಚಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ವಿಶ್ವ ಕ್ರೀಡೆಯಲ್ಲಿ ಒಂದು ಬದಲಾವಣೆಯನ್ನು ತಂದು ಅಂಪೈರಿಂಗ್‌ಗೆ ಕೊಡುಗೆ ನೀಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಆಟದಲ್ಲಿ ನನ್ನ ಪಾಲ್ಗೊಳ್ಳುವಿಕೆಯ ಈ ಅಧ್ಯಾಯದಲ್ಲಿ ವರ್ಷಗಳಲ್ಲಿ ನೀಡಿದ ಬೆಂಬಲಕ್ಕಾಗಿ ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ” ಎಂದು ಬೂನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
