ಬೆಂಗಳೂರು:
ಚಿನ್ನಸ್ವಾಮಿ ಮೈದಾನದ ಬಳಿ ಆರ್‌ಸಿಬಿ ಸಂಭ್ರಮೋತ್ಸವದ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಅಮಾನತುಗೊಂಡಿದ್ದ ಪೊಲೀಸ್ ಕಮಿಷನರ್ ಬಿ.ದಯಾನಂದ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರನ್ನು ಗುರುವಾರ ಬೆಂಗಳೂರು ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಗದೀಶ್ ಅವರು ವಿಚಾರಣೆ ನಡೆಸಿದರು. ತನಿಖಾ ವರದಿ ನೀಡಲು ಸರ್ಕಾರ ನೀಡಿದ್ದ 15 ದಿನಗಳ ಗಡುವು ವಿಸ್ತರಣೆಗೆ ಅನುಮತಿ ಪಡೆದುಕೊಂಡಿದ್ದ ತನಿಖಾಧಿಕಾರಿ ಜಗದೀಶ್ ಮುಂದಿನ ವಾರಕ್ಕೆ ವರದಿ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.
ದುರಂತ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಈ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಹೇಳಿಕೆ ನೀಡಲು ಅಧಿಕಾರಿಗಳು ಸಮಯಾವಕಾಶ ಪಡೆದುಕೊಂಡಿದ್ದರು. ಗುರುವಾರ ಬರುವಂತೆ ಮತ್ತೆ ನೋಟಿಸ್ ಜಾರಿ ಹಿನ್ನೆಲೆಯಲ್ಲಿ, ಹಾಜರಾದ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಯಿತು.
ದಯಾನಂದ ಅವರು ಖಾಸಗಿ ಕಾರಿನಲ್ಲಿ ವಕೀಲರೊಂದಿಗೆ ಕೆ.ಜಿ.ರಸ್ತೆಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ವಿಚಾರಣೆಗೆ ಹಾಜರಾದರು. ಕಾಲ್ತುಳಿತ ಘಟನೆಗೆ ಏನು ಕಾರಣ? ಆರ್‌ಸಿಬಿ ವಿಜಯೋತ್ಸವಕ್ಕೆ ಅನುಮತಿ ನೀಡದಿದ್ದರೂ ಅನುವು ಮಾಡಿಕೊಟ್ಟಿದ್ದು ಯಾಕೆ? ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಸಂಖ್ಯೆ ಎಷ್ಟು? ನಿರೀಕ್ಷೆಗೂ ಮೀರಿ ಜನರು ಜಮಾವಣೆಗೊಂಡಿದ್ದರೂ ಪ್ರವೇಶದ್ವಾರದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸದಿರುವುದಕ್ಕೆ ಕಾರಣವೇನು? ಎಂಬುದು ಸೇರಿದಂತೆ ತನಿಖಾಧಿಕಾರಿಗಳು ಕೇಳಿದ ಹತ್ತಾರು ಪ್ರಶ್ನೆಗಳಿಗೆ ದಾಖಲೆ ಸಮೇತ ದಯಾನಂದ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಕಾಲ್ತುಳಿತ ವೇಳೆ ಸ್ಥಳದಿಂದ ವರದಿ ಮಾಡಿದ್ದ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಶುಕ್ರವಾರ(ಇಂದು) ಬಂದು ಹೇಳಿಕೆ ದಾಖಲಿಸುವಂತೆ ಆಹ್ವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ತನಿಖಾ ವರದಿ ನೀಡಲು ಸರ್ಕಾರ ನೀಡಿದ್ದ 15 ದಿನಗಳ ಗಡುವು ವಿಸ್ತರಣೆಗೆ ಅನುಮತಿ ಪಡೆದುಕೊಂಡಿದ್ದ ತನಿಖಾಧಿಕಾರಿ ಜಗದೀಶ್ ಮುಂದಿನ ವಾರಕ್ಕೆ ವರದಿ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ವಿಚಾರಣೆ ಕೊನೆಯ ಭಾಗವಾಗಿ ಶುಕ್ರವಾರ ಸಾರ್ವಜನಿಕರ ವಿಡಿಯೋ ಹೇಳಿಕೆ ದಾಖಲಿಸಿಕೊಳ್ಳಲಿದ್ಧಾರೆ. ದುರಂತಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ಪರಾಮರ್ಶೆ ನಡೆಸಲಾಗಿದೆ. ಆರ್‌ಸಿಬಿ, ಡಿಎನ್ಎ ಹಾಗೂ ಕೆಎಸ್ಸಿಎ ಮುಖ್ಯಸ್ಥರು ಹಾಗೂ ಸಿಬ್ಬಂದಿಯ ವಿಚಾರಣೆ ನಡೆದಿದೆ. ವಿಜಯೋತ್ಸವ ದಿನದಂದು ಬಂದೋಬಸ್ತ್ ಕರ್ತವ್ಯದಲ್ಲಿದ್ದ ಹಿರಿಯ ಕಾನೂನು ಸುವ್ಯವಸ್ಥೆ ಪೊಲೀಸರು ಹಾಗೂ ಸಂಚಾರ ಪೊಲೀಸರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಠಾಣೆಯಲ್ಲಿ ಅನುಮತಿಗಿಂತ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರಿಂದ ಊಹೆಗೆ ಮೀರಿ ಜನರ ಜಮಾವಣೆಗೊಂಡಿದ್ದರಿಂದ ದುರಂತ ಸಂಭವಿಸಲು ಪ್ರಮುಖ ಕಾರಣವಾಗಿದೆ. ಪ್ರವೇಶದ್ವಾರ ಸೇರಿದಂತೆ ಆಯಕಟ್ಟಿನ ಜಾಗದಲ್ಲಿ ಬ್ಯಾರಿಕೇಡ್ ಹಾಕಿ ಸೂಕ್ತ ಭದ್ರತಾ ಸಿಬ್ಬಂದಿ ನಿಯೋಜಿಸದಿರುವುದು, ಅಂತಿಮ ಘಟ್ಟದಲ್ಲಿ ಉಚಿತ ಪ್ರವೇಶದ ಬಗ್ಗೆ ಘೋಷಿಸಿರುವುದು ಹಾಗೂ ಸಮರ್ಪಕವಾದ ಪೊಲೀಸ್ ನಿರ್ವಹಣೆ ಇಲ್ಲದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.








