ಚಿಕ್ಕಮಗಳೂರು:
ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15 ರ ವರೆಗೂ ಪ್ರವಾಸಕ್ಕೆ ಬಾರದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಪ್ರವಾಸಿ ತಾಣಗಳಲ್ಲಿ ಗುಡ್ಡ, ರಸ್ತೆಗಳು ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸ ಬರುವುದನ್ನು ಮುಂದೂಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎರಡು ದಿನ ಪ್ರವೇಶ ನಿಷೇಧಿಸಲಾಗಿದೆ. ಅತಿಯಾದ ಮಳೆಯಿಂದ ದುಬಾರೆ, ಹಾರಂಗಿ ಸಾಕಾನೆ ಶಿಬಿರಗಳು ಬುಧ ಮತ್ತು ಗುರುವಾರ ಎರಡು ದಿನಗಳ ಕಾಲ ಬಂದ್ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಮಲೆನಾಡು ಭಾಗ ಮತ್ತು ಕೇರಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ನದಿಗಳು ಉಕ್ಕೇರಿ ಹರಿಯುತ್ತಿವೆ. ಜಲಾಶಯಗಳಿಗೆ ಭಾರಿ ಪ್ರಮಾಣದ ಹರಿದುಬರುತ್ತಿದೆ. ನಿರಂತರ ಮಳೆಯಿಂದಾಗಿ ಶಿರಾಡಿ, ಚಿಕ್ಕಮಗಳೂರು, ಚಾರ್ಮಾಡಿ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಸೇರಿ ವಿವಿಧೆಡೆ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ಕೃಷ್ಣಾ ಹಾಗೂ ಅದರ ಹಲವು ಉಪನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಗೋಕಾಕ್‌ನಲ್ಲಿ 800 ಮನೆಗಳು ಮುಳುಗಡೆಯಾಗಿವೆ. ಬಾಗಲಕೋಟೆ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಆರೈಕೆ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಇದರಿಂದ ಜಲ ಕಂಟಕ ಎದುರಾಗಿದೆ. ಮಳೆಯಿಂದ ರಾಜ್ಯದಲ್ಲಿ ಸಂಭವಿಸುವ ಘಟನೆಗಳ ಕುರಿತಾದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.