ಬೆಂಗಳೂರು:
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಬೆ ಉಪಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಳ್ಳಿಹಾಕಿದ್ದಾರೆ.
ಕನಕಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ನಾನೇಕೆ ಚನ್ನಪಟ್ಟಣದ ವಿಧಾನಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದರು. ಡಿಕೆ ಶಿವಕುಮಾರ್ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರೆ ಎಂಬ ಗುಮಾನಿ ಹುಟ್ಟಿದ್ದು ಎರಡು ದಿನಗಳ ಹಿಂದೆ ಅವರೇ ನೀಡಿದ್ದ ಹೇಳಿಕೆಯಿಂದ. ಹೌದು ಚನ್ನಪಟ್ಟಣದ ಪ್ರಸಿದ್ದ ಕೆಂಗಲ್ ಹನುಮಂತರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಅವರು ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆ ಚನ್ನಪಟ್ಟಣದಿಂದ ನಡೆದಿದೆ. ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲು ಕೆಂಗಲ್‌ನ ಆಂಜನೇಯ ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದ್ದರು.
ಇದು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಶಾಸಕ ಎಚ್ ಡಿ ಕುಮಾರಸ್ವಾಮಿ ಗೆದ್ದ ನಂತರ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಡಿಕೆ ಶಿವಕುಮಾರ್ ಸಿದ್ಧರಿದ್ದಾರೆ ಎಂಬ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಅಲ್ಲದೆ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಅವರು ಕನಕಪುರದ ಉಪಚುನಾವಣೆಯನ್ನು ತುಘಲಕ್ ರೀತಿಯ ನಿರ್ಧಾರ ಮತ್ತು ಸಾರ್ವಜನಿಕ ಹಣದ ವ್ಯರ್ಥ ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ನನ್ನ ಮೇಲೆ ಜವಾಬ್ದಾರಿ ಇದೆ. ಇದು ನನ್ನ ಪ್ರದೇಶ ಮತ್ತು ನಾನು ಅಲ್ಲಿ ನಾಯಕನಾಗಿದ್ದೇನೆ ಎಂದು ಹೇಳಿದರು. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉಪಚುನಾವಣೆಯನ್ನು ಎದುರಿಸುತ್ತೇವೆ. ಇನ್ನು ಅಲ್ಲಿನ ಜನರನ್ನು ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಮಾತ್ರ ಕೇಳಿದ್ದೇನೆ ಎಂದು ಹೇಳಿದರು. ನಾನು ರಾಮನಗರ ಜಿಲ್ಲೆಯವನು. ಅಲ್ಲಿನ ಮತದಾರರಲ್ಲಿ ನಮಗೆ ಶಕ್ತಿ ಕೊಡಿ ಎಂದು ಕೇಳಿದ್ದೇನೆ. ನಮ್ಮ ಮೇಲೆ ನಂಬಿಕೆ ಇಟ್ಟರೆ ಒಲವು ತೋರುತ್ತಾರೆ ಎಂದು ಡಿಸಿಎಂ ಹೇಳಿದರು.
ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂಬ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜಕೀಯ ಅಂತ್ಯ ತೀರ್ಮಾನ ಮಾಡುವವರು ಜನರು. ಯೋಗೇಶ್ವರ್ ದೊಡ್ಡವರು. ಅವರ ಮಾತಿಗೆ ಪ್ರತಿಕ್ರಿಯೆ ನೀಡುವಷ್ಟು ಸಮಯ ನನ್ನ ಬಳಿ ಇಲ್ಲ. ನಾನೂ ರಾಮನಗರ ಜಿಲ್ಲೆಯವನು. “ನಿಮ್ಮ ಋಣ ತೀರಿಸಲು ಬದ್ಧನಿದ್ದೇನೆ, ಶಕ್ತಿ ಕೊಡಿ ಎಂದು ಆ ಕ್ಷೇತ್ರದ ಜನರ ಬಳಿ ಕೇಳಿಕೊಂಡಿದ್ದೇನೆ. ನನ್ನ ಮೇಲೆ ವಿಶ್ವಾಸವಿದ್ದರೆ ಬೆಂಬಲ ನೀಡುತ್ತಾರೆ ಎಂದು ತಿಳಿಸಿದರು.
ಚನ್ನಪಟ್ಟಣದಿಂದ ಗೆದ್ದ ನಂತರ ಶಿವಕುಮಾರ್ ಅವರು ಕನಕಪುರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಅಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸೋತಿದ್ದ ತಮ್ಮ ಸಹೋದರ ಡಿಕೆ ಸುರೇಶ್ ಅವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ಯೋಜನೆಯಲ್ಲಿದ್ದಾರೆ.