ಬೆಂಗಳೂರು:
ರಾಜಧಾನಿಯಲ್ಲಿ ಹೊಸದಾಗಿ ಸೂರು ಕಟ್ಟಿಕೊಳ್ಳುವವರು ಇನ್ನು ಮುಂದೆ ಕಟ್ಟಡ ನಕ್ಷೆ ಅನುಮೋದನೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಚೇರಿಗೆ ಅಲೆಯಬೇಕಾಗಿಲ್ಲ. ಶೀಘ್ರದಲ್ಲೇ ಆರ್ಕಿಟೆಕ್ಟ್‌ಗಳೇ ಸ್ವಯಂ ಕಟ್ಟಡ ನಕ್ಷೆಗೆ ಅನುಮೋದನೆ ನೀಡಲು ಅವಕಾಶ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಟೀರಿಯರ್ ಡಿಸೈನಿಂಗ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಕಟ್ಟಡ ನಕ್ಷೆ ಮಂಜೂರಾತಿ ಪಡೆಯಲು ಜನ ಬಿಬಿಎಂಪಿ ಕಚೇರಿಗೆ ಅಲೆಯುವ ಅಗತ್ಯ ಇಲ್ಲ ಎಂದರು.
ಬಿಬಿಎಂಪಿಯಿಂದ ಅನುಮೋದನೆ ಪಡೆಯುವ ಅಗತ್ಯವಿಲ್ಲದೇ ಕಟ್ಟಡದ ನಕ್ಷೆಯನ್ನು ಸ್ವಯಂ ಅನುಮೋದನೆ ನೀಡಲು ಅಧಿಕೃತ ಆರ್ಕಿಟೆಕ್ಟ್‌ಗಳಿಗೆ ಅವಕಾಶ ಮಾಡಿಕೊಡುವ ಸರ್ಕಾರಿ ಆದೇಶವನ್ನು ನಾವು ಶೀಘ್ರದಲ್ಲೇ ಹೊರಡಿಸುತ್ತೇವೆ ಎಂದು ಡಿಸಿಎಂ ತಿಳಿಸಿದ್ದಾರೆ.
“ಅಧಿಕೃತ ಆರ್ಕಿಟೆಕ್ಟ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ಕಾರ್ಯನಿರ್ವಹಿಸಬಹುದು. ಅವರು ಕಾನೂನು ಪ್ರಕಾರ ಕಟ್ಟಡದ ನಕ್ಷೆಯನ್ನು ವಿನ್ಯಾಸಗೊಳಿಸಬಹುದು ಮತ್ತು ಅದನ್ನು ಬಿಬಿಎಂಪಿಗೆ ಸ್ವಯಂ-ಘೋಷಣೆ ಮಾಡಬಹುದು. ನೀವೆಲ್ಲರೂ ದೇಶದ ಕಾನೂನನ್ನು ಎತ್ತಿಹಿಡಿಯುತ್ತೀರಿ ಎಂದು ನಾವು ನಂಬುತ್ತೇವೆ. ಬಿಬಿಎಂಪಿ ಅಧಿಕಾರಿಗಳಿಂದ ಭ್ರಷ್ಟಾಚಾರ ಮತ್ತು ಕಿರುಕುಳವನ್ನು ತಡೆಗಟ್ಟಲು ಈ ಉಪಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.