ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು, ಬೇರೆಯವರ ಜತೆಗಿದ್ದಂತೆ ಇದ್ದರೆ ಆಗುವುದಿಲ್ಲ : ಡಿಸಿಎಂ

ಬೆಂಗಳೂರು

   ‘ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು, ಬೇರೆಯವರ ಜತೆಗಿದ್ದಂತೆ ಇದ್ದರೆ ಆಗುವುದಿಲ್ಲ.’ ಹೀಗೆಂದಿದ್ದು ಡಿಸಿಎಂ ಡಿಕೆ ಶಿವಕುಮಾರ್. ಅದೂ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಳಿ! ನಮ್ಮ ಮೆಟ್ರೋ ನಾಗಸಂದ್ರ ಮಾದಾವರ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭ ತೇಜಸ್ವಿ ಸೂರ್ಯ ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಖಡಕ್ ಆಗಿಯೇ ಉತ್ತರ ನೀಡಿದರು.

   ನಾಗಸಂದ್ರ ಮಾದಾವರ ನಡುವೆ ಮೆಟ್ರೋ ರೈಲು ಸೇವೆಗೆ ಚಾಲನೆ ನೀಡುವ ಮುನ್ನ ಡಿಕೆ ಶಿವಕುಮಾರ್ ಹಾಗೂ ತೇಜಸ್ವಿ ಸೂರ್ಯ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರದಲ್ಲಿ ಭಾಗಿಯಾದರು. ಇದೇ ವೇಳೆ, ಅನುದಾನ ವಿಚಾರವಾಗಿ ಡಿಕೆ ಶಿವಕುಮಾರ್ ಬಳಿ ತೇಜಸ್ವಿ ಸೂರ್ಯ ಪ್ರಸ್ತಾಪಿಸಿದರು.

  ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ನೀಡಿದಾಗ, ಜಯನಗರವನ್ನು ಕಡೆಗಣಿಸಿದ ಬಗ್ಗೆ ತೇಜಸ್ವಿ ಸೂರ್ಯ ಪ್ರಸ್ತಾಪಿಸಿದರು. 

  ತೇಜಸ್ವಿ ಸೂರ್ಯ ಮಾತಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ಜಯನಗರ ಶಾಸಕ ಸಿಕೆ ರಾಮಮೂರ್ತಿಯ ಮಾತು ಹೆಚ್ಚಾಯಿತು. ಆಸ್ಪತ್ರೆಯನ್ನು ಕಿತ್ತುಹಾಕಿಸಿದ್ದೇನೆ, ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು. ಬೇರೆಯವರ ರೀತಿ ಇದ್ದಹಾಗೆ ನನ್ನ ಹತ್ತಿರ ಇದ್ದರೆ ಆಗುವುದಿಲ್ಲ. ನಾನು ಅಧಿಕಾರಕ್ಕೆ ಬಂದಮೇಲೆ ಬೆಂಗಳೂರು ಅಧೋಗತಿ ತಲುಪಿದೆ ಎಂದಿದ್ದ ಎಂದು ಅಸಮಾಧಾನ ವ್ಯಕ್ತಪಡಿಸಿದರು.

   ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ತಲಾ 10 ಕೋಟಿ ರೂ. ಮಂಜೂರು ಮಾಡಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಆದರೆ, ಬಿಜೆಪಿ ಶಾಸಕರಿರುವ ಜಯನಗರ ಕ್ಷೇತ್ರಕ್ಕೆ ಮಾತ್ರ ಅನುದಾನ ಮಂಜೂರು ಮಾಡಿರಲಿಲ್ಲ. ಈ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. 

  ನಂತರ ಅನುದಾನ ನೀಡದೇ ಇರುವ ನಿರ್ಧಾರವನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ರಾಮಮೂರ್ತಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅದನ್ನು ಸಾಬೀತುಪಡಿಸಲಿ, ಆಮೇಲೆ ಅನುದಾನದ ಬಗ್ಗೆ ನೋಡೋಣ ಎಂದಿದ್ದರು. ನಂತರ, ಅನುದಾನ ವಿಚಾರವಾಗಿ ವಕೀಲ ಹೆಚ್ ಯೋಗೇಂದ್ರ ಎಂಬವರು ಡಿಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರನ್ನೂ ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap