ಬಿಬಿಎಂಪಿ ವಾರ್‌ ರೂಂಗೆ ಡಿಸಿಎಂ ದಿಢೀರ್‌ ಭೇಟಿ..!

ಬೆಂಗಳೂರು: 

    ಬೆಂಗಳೂರಿನಲ್ಲಿ ನಿನ್ನೆ ಇಡೀ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಡೀ ನಗರದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಮಳೆ ಪರಿಸ್ಥಿತಿಯ ಮಾಹಿತಿ ಪಡೆಯಲು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಬಿಬಿಎಂಪಿ ವಾರ್ ರೂಂಗೆ ಭೇಟಿ ನೀಡಿದ್ದರು.

    ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹಡ್ಸನ್ ವೃತ್ತದ ಬಿಬಿಎಂಪಿ ಕೇಂದ್ರ ಕಚೇರಿಯ ವಾರ್ ರೂಂಗೆ ಮಧ್ಯರಾತ್ರಿ ಹಠಾತ್ ಭೇಟಿ ನೀಡಿ, ಬೆಂಗಳೂರಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಗರದ ಪರಿಸ್ಥಿತಿ, ಅನಾಹುತ, ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ನಗರದ ವಿವಿದೆಡೆಯಿಂದ ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳ ಮಾಹಿತಿ ಪಡೆದ ಅವರು, ತಕ್ಷಣ ನಾಗರಿಕರ ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

     ಯಾವ್ಯಾವ ರಾಜಕಾಲುವೆಯಲ್ಲಿ ಎಷ್ಟು ನೀರು ಹರಿಯುತ್ತಿದೆ ಎನ್ನುವ ಮಾಹಿತಿಯೂ ಬರುತ್ತಿದೆ. ಈಗಾಗಲೇ ನೂರಾರು ದೂರುಗಳು ಬಂದಿವೆ. ತಕ್ಷಣ ಅಟೆಂಡ್‌ ಮಾಡುತ್ತಿದ್ದಾರೆ. ನಾನೂ ವಲಯ ಆಯುಕ್ತರಿಗೆ ಮಾತನಾಡಿ, ನಾಗರಿಕರಿಗೆ ಸಮಸ್ಯೆ ಆಗದಂತೆ ಸೂಚಿಸಿದ್ದೇನೆ. ಏರ್‌ಪೋರ್ಟ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಆಗಿದೆ, ಆಯುಕ್ತರೇ ಅಲ್ಲಿದ್ದು ಸಮಸ್ಯೆ ಬಗೆಹರಿಸುತ್ತಿದ್ದಾರೆ.

     ಆರ್‌ಆರ್‌ ನಗರ ಕೊನೇ ಪಾಯಿಂಟ್‌ ಆಗಿರುವುದರಿಂದ ಎಲ್ಲಾ ನೀರು ಅಲ್ಲಿ ಹೋಗಿ ಓವರ್‌ಫ್ಲೋ ಆಗಿ ಸಮಸ್ಯೆ ಆಗಿರುವ ದೂರು ಬಂದಿದೆ. ಅದನ್ನು ಪರಿಹರಿಸಲಾಗುತ್ತದೆ. ಇಷ್ಟು ಬಿಟ್ಟರೆ ಹೆಚ್ಚಿನ ಸಮಸ್ಯೆ ಆಗಿಲ್ಲ. ಮಳೆ ಬಂದರೆ ಉತ್ತಮ, ಆದರೆ ಮುಂಜಾಗ್ರತೆಯಿಂದಲೂ ಇರುವಂತೆ ಸೂಚಿಸಿದ್ದೇನೆ ಎಂದರು. ಕೆಲವು ಕಡೆ ಅಂಡರ್‌ಪಾಸ್‌ಗಳನ್ನು ಮುಚ್ಚಲಾಗಿದೆ. ವಾರ್‌ ರೂಂ ತಂಡ ದೂರು ಬಂದ ಕೂಡಲೇ ಸ್ಪಂದಿಸುತ್ತಿದ್ದಾರೆ ಎಂದರು.

     ಮಳೆ ಅವಾಂತರದಿಂದ ನಾಲ್ಕು ಮರಗಳು ಧರೆಗುರುಳಿವೆ. ಬೆಂಗಳೂರು ಪೂರ್ವ ವಲಯದಲ್ಲಿ 1, ಮಹದೇವಪುರ ವಲಯದಲ್ಲಿ ಒಂದು ಮರ, ಬೆಂಗಳೂರು ದಕ್ಷಿಣದಲ್ಲಿ ಎರಡು ಮರ ಧರೆಗುರುಳಿವೆ. ರಸ್ತೆಯಲ್ಲಿ ಚರಂಡಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ನಗರದ ಏಳು ವಲಯಗಳ ಪೈಕಿ 18 ಕಡೆ ಡ್ರೈನೇಜ್ ನೀರು ರಸ್ತೆಗೆ ಹರಿಯುತ್ತಿತ್ತು. 10 ಕಂಪ್ಲೇಟ್ ಬಂದಿದೆ, ಈ ಪೈಕಿ 6 ದೂರುಗಳನ್ನು ಪರಿಹರಿಸಲಾಗಿದೆ ಎಂದು ಬಿಬಿಎಂಪಿ ವಾರ್‌ ರೂಂ ಅಧಿಕಾರಿಗಳು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಾಹಿತಿ ನೀಡಿದರು. 

    ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ಬಳಿ ದ್ವಿಚಕ್ರವಾಹನ, ಗೂಡ್ಸ್‌ ವಾಹನ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಿವೆ. ಸುತ್ತಮುತ್ತಲಿನ ಪ್ರದೇಶದ ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿ ವ್ಯಾಪಾರಸ್ಥರು ಪರದಾಡುವಂತಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap