ಅಡಿಲೇಡ್:
ಭಾರತೀಯ ವಿದ್ಯಾರ್ಥಿ ಮೇಲೆ ಜನಾಂಗೀಯ ಪ್ರೇರಿತವಾಗಿ ದಾಳಿ ನಡೆಸಲಾಗಿದ್ದು, ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಜುಲೈ 19ರಂದು ಶನಿವಾರ ರಾತ್ರಿ 9.22 ರ ಸುಮಾರಿಗೆ ನಡೆದಿದೆ. ಗಾಯಗೊಂಡಿರುವ ಭಾರತೀಯ ವಿದ್ಯಾರ್ಥಿ ಚರಣ್‌ಪ್ರೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಕ್ಷಿಣ ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ಹೊರದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಜುಲೈ 19ರಂದು ರಾತ್ರಿ 9.22ರ ಸುಮಾರಿಗೆ ಕಿಂಟೋರ್ ಅವೆನ್ಯೂ ಬಳಿ 23 ವರ್ಷದ ಭಾರತೀಯ ವಿದ್ಯಾರ್ಥಿ ಚರಣ್‌ಪ್ರೀತ್ ಸಿಂಗ್ ತಮ್ಮ ಪತ್ನಿಯೊಂದಿಗೆ ನಗರದ ಬೆಳಕಿನ ಪ್ರದರ್ಶನಗಳನ್ನು ನೋಡಲು ಮನೆಯಿಂದ ಹೊರಗೆ ಹೋಗಿದ್ದರು. ದಂಪತಿ ಕಾರನ್ನು ನಿಲ್ಲಿಸಿದ್ದಾಗ ಐದು ಮಂದಿ ಅವರ ಕಾರಿನ ಬಳಿ ಬಂದು ದಾಳಿ ನಡೆಸಿದ್ದಾರೆ. ಲೋಹದ ಚೈನ್, ಚೂಪಾದ ವಸ್ತುಗಳಿಂದ ಅವರ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ದೃಶ್ಯವಾಳಿಯಲ್ಲಿ ದಾಳಿಕೋರರು ಇನ್ನೊಂದು ವಾಹನದಿಂದ ಇಳಿದು ಸಿಂಗ್ ಅವರ ವಾಹನದ ಬಳಿ ಬಂದು ಅವರನ್ನು ಹಿಂಸಾತ್ಮಕವಾಗಿ ಹೊಡೆಯಲು ಪ್ರಾರಂಭಿಸಿದರು ಎನ್ನುವುದನ್ನು ಕಾಣಬಹುದು. ಅವರ ಮೇಲೆ ದಾಳಿ ನಡೆಸುವ ಸಮಯದಲ್ಲಿ ದಾಳಿಕೋರರು ಜನಾಂಗೀಯವಾಗಿ ನಿಂದಿಸಿ ಓಡಿಹೋಗು, ಭಾರತೀಯ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅವರ ದಾಳಿಯಿಂದ ಸಿಂಗ್ ಮುಖದ ಮೂಳೆ ಮುರಿದಿದ್ದು, ಮೆದುಳಿಗೆ ಆಘಾತಗೊಂಡು ರಸ್ತೆಯಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರು ಪಾರ್ಕಿಂಗ್ ವಿಚಾರದಲ್ಲಿ ಉಂಟಾದ ಘರ್ಷಣೆ ಜನಾಂಗೀಯ ಹಲ್ಲೆಗೆ ಕಾರಣವಾಗಿದೆ ಎಂದು ಸಿಂಗ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಸಿಂಗ್ ಅವರ ಪತ್ನಿ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾಗ ದಾಳಿಕೋರರನ್ನು ಅವರನ್ನು ಹಿಂಬಾಲಿಸಿದರು. ಕೊನೆಗೆ ದಾಳಿಕೋರರು ಅಲ್ಲಿಂದ ಹೊರಟುಹೋದಾಗ ಅವರ ಕಾರಿನ ನೋಂದಣಿ ಸಂಖ್ಯೆಯನ್ನು ಅವರು ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಆಸ್ಟ್ರೇಲಿಯಾ ಪೊಲೀಸರು ದೃಢಪಡಿಸಿದ್ದಾರೆ.
