ಬೆಂಗಳೂರು
ಕೃಷಿ ಮತ್ತು ತೋಟಗಾರಿಕೆಗೆ ಪ್ರಮುಖ ನೀರಿನ ಮೂಲವಾಗಿರುವ ಅರ್ಕಾವತಿ ನದಿಯ ನೀರಿನ ಮಾದರಿಯಲ್ಲಿ ಪಾದರಸ, ನಿಷೇಧಿತ ಕೀಟನಾಶಕ ಡಿಡಿಟಿ, ಕ್ಯಾನ್ಸರ್ ಉಂಟುಮಾಡಬಲ್ಲ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ (ಪಿಎಎಚ್) ಮತ್ತು ಫ್ಲೋರೈಡ್ ಸೇರಿದಂತೆ ಇತರ ಲೋಹಗಳು ಮತ್ತು ವಿಷಕಾರಿ ಅಂಶಗಳು ಕಂಡುಬಂದಿವೆ ಎಂದು ವರದಿಯಾಗಿದೆ. ನದಿಯಿಂದ ಸಂಗ್ರಹಿಸಿದ ನೀರಿನ ಮತ್ತು ಕೆಸರಿನ ಮಾದರಿಗಳ ಮೇಲೆ ಇತ್ತೀಚೆಗೆ ನಡೆಸಲಾದ ಸಂಶೋಧನೆಗಳಿಂದ ಈ ವಿಚಾರ ತಿಳಿದುಬಂದಿದೆ.
ಅರ್ಕಾವತಿ ನದಿ ಕೈಗಾರಿಕಾ ಮಾಲಿನ್ಯದಿಂದ ತೀವ್ರವಾಗಿ ಬಳಲುತ್ತಿದೆ. ನಂದಿ ಬೆಟ್ಟದ ಬಳಿ ಉಗಮವಾಗುವ ಈ ನದಿ ಬೆಂಗಳೂರಿನ ವೃಷಭಾವತಿಯನ್ನು ಸೇರುತ್ತದೆ. ವೃಷಭಾವತಿ ಕೂಡ ಬೆಂಗಳೂರು ನಗರದ ಕೊಳಚೆ ನೀರು ಮತ್ತು ಕೈಗಾರಿಗೆ ತ್ಯಾಜ್ಯಗಳಿಂದ ಮಲಿನಗೊಳ್ಳುತ್ತಿದೆ. ಅರ್ಕಾವತಿ ನದಿಯ ರಕ್ಷಣೆಗೆ 2 ದಶಕಗಳ ಹಿಂದೆಯೇ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದಾಗ್ಯೂ, ಮಾಲಿನ್ಯ ಮುಂದುವರಿದಿದೆ.
ಬೆಂಗಳೂರು ಮೂಲದ ‘ಪಾನಿ ಅರ್ಥ್’ ಸಂಘಟನೆಯ ಸದಸ್ಯರು ಅರ್ಕಾವತಿಯ ನದಿಯ ಮೂರು ಸ್ಥಳಗಳಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ತಿಪ್ಪಗೊಂಡನಹಳ್ಳಿ (ಟಿಜಿ ಹಳ್ಳಿ) ಜಲಾಶಯದ ಮೇಲ್ಭಾಗ ಮತ್ತು ಕೆಳಭಾಗ, ದೊಡ್ಡ ಮುದವಾಡಿ ಸೇತುವೆ (ಅರ್ಕಾವತಿ-ವೃಷಭಾವತಿ ಸಂಗಮದಿಂದ 10 ಕಿಮೀ ಮೇಲ್ಭಾಗದ ಜಾಗ) ಬಳಿಯಿಂದ ಮಾದರಿಯನ್ನು ಸಂಗ್ರಹಿಸಲಾಗಿತ್ತು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.
1972 ರಿಂದ ಭಾರತದಲ್ಲಿ ನಿಷೇಧಿಸಲಾಗಿರುವ ಮಾರಕ ರಾಸಾಯನಿಕ ಡಿಡಿಟಿ ಅಂಶವು ಅಪಾಯಕಾರಿ ಮಟ್ಟದಲ್ಲಿ ನೀರಿನಲ್ಲಿ ಕಂಡುಬಂದಿದೆ. ಟಿಜಿ ಹಳ್ಳಿ ಜಲಾಶಯದ 1 ಕಿಮೀ ಮೇಲ್ಭಾಗದಿಂದ ಸಂಗ್ರಹಿಸಿರುವ ಮಾದರಿಯಲ್ಲಿ, ಯುರೋಪಿಯನ್ ಒಕ್ಕೂಟದ ನೀರಿನ ಗುಣಮಟ್ಟದ ಮಾನದಂಡಗಳಿಗಿಂತಲೂ 75 ಪಟ್ಟು ಹೆಚ್ಚು ಡಿಡಿಟಿ ಸಾಂಧ್ರತೆ ಕಂಡುಬಂದಿದೆ ಎಂದು ವರದಿ ಉಲ್ಲೇಖಿಸಿದೆ.
ಹೆಕ್ಸಾವೆಲೆಂಟ್ ಕ್ರೋಮಿಯಂ ರಾಸಾಯನಿ ಕೂಡ ನೀರಿನಲ್ಲಿ ಪತ್ತೆಯಾಗಿದೆ. ಕೆನಡಾ ನೀರಿನ ಗುಣಮಟ್ಟ ಮಾರ್ಗಸೂಚಿಗಳ ಪ್ರಕಾರ, ಲೋಹದ ಲೇಪನ ಪ್ರಕ್ರಿಯೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಈ ರಾಸಾಯನಿಕವು, ಅರ್ಕಾವತಿ ನೀರಿನಲ್ಲಿ ಸುರಕ್ಷತಾ ಮಿತಿಗಳಿಂದಲೂ 100 ಪಟ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ.
ಕೆನಡಾ ನೀರಿನ ಗುಣಮಟ್ಟ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿರುವುದಕ್ಕಿಂತಲೂ 16 ರಿಂದ 26 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪಾದರಸದ ಅಂಶ ಇರವುದೂ ಸಂಶೋಧನೆಯಿಂದ ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಟ್ಟಕ್ಕಿಂತಲೂ ಇದು ಹೆಚ್ಚಾಗಿದೆ. ಈ ಹಾನಿಕಾರಕ ರಾಸಾಯನಿಕಗಳು ಮತ್ತು ಹೈಡ್ರೋಕಾರ್ಬನ್‌ಗಳು ಚರ್ಮದ ಕಿರಿಕಿರಿಯಿಂದ ತೊಡಗಿ ಕ್ಯಾನ್ಸರ್‌ವರೆಗಿನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನಲಾಗಿದೆ. ಎಲ್ಲಾ ಮೂರು ಕಡೆಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿಯೂ ಇವು ಪತ್ತೆಯಾಗಿವೆ.
ಐಐಟಿ ಮದ್ರಾಸ್‌ನಲ್ಲಿರುವ ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕ್ಲೀನ್ ವಾಟರ್’ನಲ್ಲಿ ಕೆಸರು ಮತ್ತು ನೀರಿನ ಮಾದರಿಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ವೃಷಭಾವತಿ ನೀರಿನ ಗುಣಮಟ್ಟದ ಸಂಶೋಧನೆ ವರದಿ ಸೇರಿದಂತೆ ವಿವರವಾದ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.
