ಭಾರತದಲ್ಲಿ ಮೊದಲ ಓಮಿಕ್ರಾನ್ ಸೋಂಕಿತ ವ್ಯಕ್ತಿ ಸಾವು!

ಮುಂಬೈ:

          ಮುಂಬೈ, ಡಿಸೆಂಬರ್ 31: ಭಾರತದಲ್ಲಿ ಮೊದಲ ಓಮಿಕ್ರಾನ್ ಸಾವಿನ ಪ್ರಕರಣ ವರದಿಯಾಗಿದೆ. ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿದ 52 ವರ್ಷದ ವ್ಯಕ್ತಿಯೊಬ್ಬರು ತೀವ್ರ ಹೃದಯಾಘಾತದಿಂದ ಪ್ರಾಣ ಬಿಟ್ಟಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ದಲ್ಲಿ ನಡೆದಿದೆ.

      ಓಮಿಕ್ರಾನ್ ಸೋಂಕು ತಗುಲಿದ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಸಾವಿಗೆ ಓಮಿಕ್ರಾನ್ ಸೋಂಕು ಕಾರಣ ಎಂದು ಪರಿಗಣಿಸದಂತೆ ಹೇಳಲಾಗುತ್ತಿದೆ.

ಇದರ ಹೊರತಾಗಿ ರಾಜ್ಯದಲ್ಲಿ ಒಂದೇ ದಿನ ಅತಿಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 24 ಗಂಟೆಗಳಲ್ಲೇ 198 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 450ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 5,368 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಪೈಕಿ ಸೋಂಕಿತರ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆೊಳಪಡಿಸಿದ ಸಂದರ್ಭದಲ್ಲಿ 198 ಸೋಂಕಿತರಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಅತಿಹೆಚ್ಚು ಹರಡುವಿಕೆ ವೇಗವನ್ನು ಹೊಂದಿದೆ ಎಂಬ ತಜ್ಞರ ಎಚ್ಚರಿಕೆ ಸತ್ಯವಾಗುತ್ತಿದೆ. ರಾಜ್ಯದಲ್ಲಿ ಬುಧವಾರಕ್ಕಿಂತ ಗುರುವಾರ ಪತ್ತೆಯಾದ ಸೋಂಕಿತ ಪ್ರಕರಣಗಳಲ್ಲಿ ಶೇ.37ರಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಓಮಿಕ್ರಾನ್ ಸೋಂಕು ತಗುಲಿದ ವ್ಯಕ್ತಿಯು ಸಾವು

       ಕಳೆದ ಡಿಸೆಂಬರ್ 28ರಂದು ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ಸ್ಥಳೀಯ ಯಶವಂತರಾವ್ ಚೌವ್ಹಾಣ್ ಆಸ್ಪತ್ರೆಯಲ್ಲಿ 52 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಇವರಿಗೆ ಓಮಿಕ್ರಾನ್ ಸೋಂಕು ತಗುಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ನೈಜೀರಿಯಾಗೆ ಪ್ರಯಾಣಿಸಿದ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಯ ಸಾವನ್ನು ದೇಶದಲ್ಲಿ ಮೊದಲ ಓಮಿಕ್ರಾನ್ ಸೋಂಕಿನ ಸಾವು ಎಂದು ತಿಳಿಸಲಾಗಿದೆ. ಈ ವ್ಯಕ್ತಿ ಕಳೆದ 13 ವರ್ಷಗಳಿಂದಲೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.

“ಈ ರೋಗಿಯ ಸಾವು ಕೊವಿಡ್-19 ಅಲ್ಲದ ಕಾರಣಗಳಿಂದ ಆಗಿರುತ್ತದೆ. ಕಾಕತಾಳೀಯ ಎಂದರೆ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ವೈರಾಲಜಿ ನೀಡಿದ ವರದಿಯಲ್ಲಿ ಈ ವ್ಯಕ್ತಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ,” ಎಂದು ಆರೋಗ್ಯ ಇಲಾಖೆ ಹೇಳಿದೆ.

ಮುಂಬೈನಲ್ಲಿ ಶೇ.46ರಷ್ಟು ಪ್ರಕರಣಗಳು ಹೆಚ್ಚು

ಮಹಾರಾಷ್ಟ್ರದ ಪೈಕಿ ಮಹಾನಗರಿ ಮುಂಬೈನಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 3,671 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮೊನ್ನೆಗಿಂತ ನಿನ್ನೆ ವರದಿಯಾದ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.46ರಷ್ಟು ಏರಿಕೆ ಕಂಡು ಬಂದಿದೆ. ಇದರ ಹೊರತಾಗಿ ಮುಂಬೈ ನಗರವೊಂದರಲ್ಲೇ 190 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮುಂಬೈನಲ್ಲಿ ಐದು ಪಟ್ಟು ಕೊವಿಡ್-19 ಪ್ರಕರಣಗಳ ಹೆಚ್ಚಳ

ವಾಣಿಜ್ಯನಗರಿ ಮುಂಬೈನಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಒಂದೇ ವಾರದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಶುಕ್ರವಾರ ನಗರದಲ್ಲಿ 683 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು,

ಆದರೆ ಈ ಶುಕ್ರವಾರವೊಂದೇ ದಿನದಲ್ಲಿ 3,671 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆ ಮೂಲಕ ಒಂದೇ ವಾರದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದೆ.

ಓಮಿಕ್ರಾನ್ ರೂಪಾಂತರಿ ಸೋಂಕಿತರ ಭಯ

ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಈಗಾಗಲೇ 961ರ ಗಡಿ ದಾಟಿದೆ. ಮಹಾರಾಷ್ಟ್ರವೊಂದರಲ್ಲೇ ಈವರೆಗೆ 450 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಕೊರೊನಾವೈರಸ್ ಅಲೆಯ ಭೀತಿಯಲ್ಲಿ ಮುಂಬೈ ಮಹಾನಗರ ಪಾಲಿಕೆಯು ಹೆಚ್ಚುತ್ತಿರುವ ಪ್ರಕರಣಗಳ ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ ವಾರ್ಡ್ ಮಟ್ಟದ ವಾರ್ ರೂಮ್ ಅನ್ನು ಪುನಾರಂಭಿಸುತ್ತಿದೆ.

ಈ ವಾರ್ ರೂಮ್‌ಗಳು ಎಲ್ಲಾ 24 ವಾರ್ಡ್‌ಗಳಲ್ಲಿ ಆಸ್ಪತ್ರೆಯ ದಾಖಲಾತಿ, ಆಮ್ಲಜನಕ ಮತ್ತು ಔಷಧದ ಅವಶ್ಯಕತೆಗಳು ಮತ್ತು ಲಸಿಕೆ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿವೆ.

ಈ ವಾರ್ ರೂಮ್ ಮೂಲಕ “ಕೊವಿಡ್-19 ಪರೀಕ್ಷೆ, ಸೋಂಕಿತರ ಪತ್ತೆಹಚ್ಚುವಿಕೆ ಮತ್ತು ರೋಗಿಗಳ ಚಿಕಿತ್ಸೆ” ತಂತ್ರವನ್ನು ಪಾಲಿಸುತ್ತದೆ. ಇದರ ಜೊತೆಗೆ ಕೊವಿಡ್-19 ರೋಗಿಗಳ ಹೋಮ್ ಕ್ವಾರೆಂಟೇನ್ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಮಾಡುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap