ದೀಪಾವಳಿಗೆ ಶುಭ ಹಾರೈಸಿದ ವಿಶ್ವ ನಾಯಕರು……!

ನವದೆಹಲಿ:

    ಪ್ರಧಾನಿ ನರೇಂದ್ರ ಮೋದಿ  ರಾಷ್ಟ್ರಪತಿ ದ್ರೌಪದಿ ಮುರ್ಮು  ಸೇರಿದಂತೆ ದೇಶ ವಿದೇಶಗಳ ಅನೇಕ ನಾಯಕರುಗಳು ಭಾರತೀಯರಿಗೆ ಬೆಳಕಿನ ಹಬ್ಬ ದೀಪಾವಳಿಯ  ಶುಭಾಶಯಗಳನ್ನು  ಕೋರಿದ್ದಾರೆ. ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ಜನತೆಗೆ ದೀಪಾವಳಿಯ ಶುಭಾಶಯ ಕೋರಿದರು. ಬೆಳಕಿನ ಹಬ್ಬವು ದೇಶವಾಸಿಗಳ ಜೀವನವನ್ನು ಸಾಮರಸ್ಯ ಮತ್ತು ಸಂತೋಷದಿಂದ ಬೆಳಗಿಸಲಿ. ನಮ್ಮ ಸುತ್ತಲೂ ಸಕಾರಾತ್ಮಕತೆಯ ಚೈತನ್ಯ ಮೇಲುಗೈ ಸಾಧಿಸಲಿ ಎಂದು ಹಾರೈಸಿದ್ದಾರೆ.

   ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ದೇಶದ ಜನತೆಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಹಬ್ಬವು ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು ಎಲ್ಲರಿಗೂ ಅವಕಾಶ ನೀಡುತ್ತದೆ. ಅವರ ಜೀವನದಲ್ಲಿ ಸಂತೋಷವನ್ನು ತರುತ್ತದೆ. ದೀಪಾವಳಿಯನ್ನು ಸುರಕ್ಷಿತವಾಗಿ, ಜವಾಬ್ದಾರಿಯುತವಾಗಿ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಿ ಎಂದು ಹೇಳಿದ್ದಾರೆ.

   ಭಾರತದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಕತ್ತಲೆಯ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ದೇಶಾದ್ಯಂತ ಅಪಾರ ಉತ್ಸಾಹದಿಂದ ಆಚರಿಸಲಾಗುವ ದೀಪಾವಳಿಯ ಶುಭ ಸಂದರ್ಭವು ಪರಸ್ಪರ ವಾತ್ಸಲ್ಯ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

   ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಎಲ್ಲರ ಸಮೃದ್ಧಿಗಾಗಿ ಶ್ರೀರಾಮನಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

   ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು, ಎಲ್ಲರಿಗೂ ಸಂತೋಷ ಮತ್ತು ಸಂತೋಷದಾಯಕ ದೀಪಾವಳಿಯನ್ನು ಹಾರೈಸುತ್ತೇನೆ. ಬೆಳಕಿನ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಆಶಿಸಿದ್ದಾರೆ.

   ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿಯು ಸತ್ಯದ ಶಾಶ್ವತ ವಿಜಯದ ಪವಿತ್ರ ಸಂಕೇತವನ್ನು ಪ್ರತಿನಿಧಿಸುವ ಹಬ್ಬವಾಗಿದೆ ಎಂದು ಹೇಳಿದ್ದಾರೆ.

   ದೀಪಾವಳಿಯು ಕೇವಲ ದೀಪಗಳನ್ನು ಬೆಳಗಿಸುವ ಆಚರಣೆಯಲ್ಲ, ಬದಲಾಗಿ ಆತ್ಮದಲ್ಲಿ ಭರವಸೆ ಮತ್ತು ಸಾಮರಸ್ಯದ ನಾಡಿಮಿಡಿತದ ದೀಪವಾಗಿದೆ. ಭಗವಾನ್ ಶ್ರೀ ರಾಮ ಮತ್ತು ತಾಯಿ ಜಾನಕಿಯ ಅನುಗ್ರಹವು ನಮ್ಮ ಮನೆಗಳನ್ನು ಮಾತ್ರವಲ್ಲದೆ ನಮ್ಮ ಹೃದಯಗಳನ್ನು ಸಹ ಬೆಳಗಿಸಲಿ. ಪ್ರತಿಯೊಬ್ಬರ ಜೀವನದಲ್ಲಿ ನಂಬಿಕೆ, ಉತ್ಸಾಹದ ದೀಪವು ಬೆಳಗಲಿ ಎಂದು ತಿಳಿಸಿದ್ದಾರೆ. ಇನ್ನು ಅನೇಕ ವಿಶ್ವ ನಾಯಕರು ಮತ್ತು ವಿದೇಶಿ ರಾಯಭಾರಿಗಳು ಕೂಡ ಭಾರತೀಯರಿಗೆ ದೀಪಾವಳಿಯ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದರು. 

   ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಬೆಳಕಿನ ಮಹಾ ಹಬ್ಬವನ್ನು ಆಚರಿಸಲು ನೀವು ಒಟ್ಟುಗೂಡುತ್ತಿರುವಾಗ ಈ ವಿಶೇಷ ಸಮಯವು ಉಜ್ವಲ ಭವಿಷ್ಯದ ಭರವಸೆಯೊಂದಿಗೆ ನಿಮ್ಮನ್ನು ಉನ್ನತೀಕರಿಸಲಿ. ಇದು ಸಂಪೂರ್ಣವಾಗಿ ಅದ್ಭುತವಾದ ಆಚರಣೆಯಾಗಲಿ ಎಂದು ಹೇಳಿದ್ದಾರೆ.

  ದುಬೈನ ಆಡಳಿತಗಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಯುಎಇ ಮತ್ತು ಪ್ರಪಂಚದಾದ್ಯಂತ ದೀಪಾವಳಿಯನ್ನು ಆಚರಿಸುವವರಿಗೆ ಹೃತ್ಪೂರ್ವಕ ಶುಭಾಶಯಗಳು. ಬೆಳಕಿನ ಈ ಹಬ್ಬವು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಶಾಂತಿ, ಸುರಕ್ಷತೆ ಮತ್ತು ಸಮೃದ್ಧಿಯನ್ನು ತರಲಿ ಎಂದು ತಿಳಿಸಿದ್ದಾರೆ.

   ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರು, ಕತ್ತಲೆಯ ಮೇಲೆ ಬೆಳಕು. ಭಯಕ್ಕಿಂತ ಭರವಸೆ. ದೀಪಾವಳಿ ಎಂದರೆ ನಾವು ನಮ್ಮ ಮನೆಗಳನ್ನು ಬೆಳಗುವುದು ಮಾತ್ರವಲ್ಲ ಅವನ್ನು ನಮ್ಮ ಹೃದಯದಲ್ಲಿ ಹೊತ್ತಿರುವ ಆಚರಣೆಯಾಗಿದೆ ಎಂದು ತಿಳಿಸಿದ್ದಾರೆ.

  ವಿಶ್ವಸಂಸ್ಥೆಯು ಕೂಡ ಭಾರತೀಯರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿತು. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಅನೇಕ ಧರ್ಮಗಳ ಅನುಯಾಯಿಗಳು ಆಚರಿಸುವ ದೀಪಗಳ ಹಬ್ಬವಾದ ದೀಪಾವಳಿಯ ಸಮಯದಲ್ಲಿ ಸಾಂಕೇತಿಕವಾಗಿ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತದೆ. ಆಚರಿಸುವ ಎಲ್ಲರಿಗೂ ನಾವು ಸಂತೋಷ ಮತ್ತು ಸುರಕ್ಷಿತ ದೀಪಾವಳಿಯನ್ನು ಹಾರೈಸುತ್ತೇವೆ ಎಂದು ತಿಳಿಸಿದೆ.ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿಯು, ದೀಪಾವಳಿಯ ಸಂತೋಷದಾಯಕ ಸಂದರ್ಭದಲ್ಲಿ ಜನರು ಮತ್ತು ಭಾರತ ಸರ್ಕಾರಕ್ಕೆ ನಮ್ಮ ಆತ್ಮೀಯ ಶುಭಾಶಯಗಳು. ದೀಪಗಳ ಹಬ್ಬವು ಭಾರತದ ಜನರಿಗೆ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ನಮ್ಮ ಎರಡು ರಾಷ್ಟ್ರಗಳ ನಡುವಿನ ಸ್ನೇಹದ ಬಂಧಗಳನ್ನು ಬಲಪಡಿಸಲಿ ಎಂದು ಹೇಳಿದೆ. 

  ಇಸ್ರೇಲ್‌ನ ಮಾಜಿ ರಾಯಭಾರಿ ನಾಯರ್ ಗಿಲೋನ್ ಕೂಡ ಭಾರತೀಯರಿಗೆ ಶುಭ ಹಾರೈಸಿದರು. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ದೀಪಾವಳಿಯ ಶುಭಾಶಯಗಳು. ನನ್ನ ಭಾರತೀಯ ವಿಸ್ತೃತ ಕುಟುಂಬಕ್ಕೆ ಪ್ರೀತಿ ಮತ್ತು ನಗೆಯಿಂದ ಹೊಳೆಯುವ ದೀಪಗಳ ಹಬ್ಬವನ್ನು ಹಾರೈಸುತ್ತೇನೆ ಎಂದು ಬರೆದಿದ್ದಾರೆ. ದೀಪಾವಳಿಯ ದೈವಿಕ ಬೆಳಕು ನಿಮ್ಮ ಜೀವನವನ್ನು ಶಾಂತಿ, ಸಮೃದ್ಧಿ ಮತ್ತು ಅಂತ್ಯವಿಲ್ಲದ ಸಂತೋಷದಿಂದ ತುಂಬಲಿ ಎಂದು ಅವರು ಹಾರೈಸಿದ್ದಾರೆ.

Recent Articles

spot_img

Related Stories

Share via
Copy link