ನನ್ನ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ : ಹೆಚ್‌ ವಿಶ್ವನಾಥ್

ಮೈಸೂರು:

    ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ. ಈ ಕುರಿತು ನನಗೆ ನೋಟಿಸ್ ಬಂದಿದೆ. ನಾನೂ ಲಾಯರ್ ಆಗಿದ್ದವನು. ಇದಕ್ಕೆಲ್ಲ ಉತ್ತರ ನೀಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್‌ ಹೇಳಿದರು.

    ಮೈಸೂರಿನಲ್ಲಿ ಮಾತನಾಡಿದ ಅವರು, ಮುಡಾ ಹಗರಣ ತನಿಖೆ ಮಾಡುತ್ತೇವೆ ಎಂದು ಹೇಳಿದರು. ಏನಾಯ್ತು ಈಗ? ಬೈರತಿ ಸುರೇಶ್ ಮುಡಾ ಪ್ರಾಧಿಕಾರಕ್ಕೆ ಬಂದು ಹೋದ ಮೇಲೂ ಮುಡಾದಲ್ಲಿ 500 ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಜನಾಂದೋಲನ, ಮೈತ್ರಿ ಪಕ್ಷದ ಪಾದಯಾತ್ರೆ ಸಮಾವೇಶ ಕುರಿತು ಪ್ರತಿಕ್ರಿಯಿಸಿ, ಸಮಾವೇಶ, ಪಾದಯಾತ್ರೆ ಮೂಲಕ ರಾಜ್ಯದ ಜನತೆಗೆ ಯಾವ ಸಂದೇಶ ನೀಡಿಲ್ಲ.

    ಸಮಾವೇಶದುದ್ದಕ್ಕೂ ಪರಸ್ಪರ ಬೈದಾಡಿಕೊಂಡಿದ್ದೀರಿ. ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆದರೂ ಜನ ಸಾಮಾನ್ಯರಿಗೆ ಒಂದು ನಿವೇಶನ ಹಂಚಿಕೆ ಮಾಡಲು ಆಗಲಿಲ್ಲ. ಮುಡಾದಲ್ಲಿ 86 ಸಾವಿರ ಜನ ಅರ್ಜಿ ಹಾಕಿದ್ದಾರೆ. ಜನರಿಗೆ ಸೈಟ್‌ ಕೊಡುವುದನ್ನು ಬಿಟ್ಟು, ಸಿದ್ದರಾಮಯ್ಯ ತನ್ನ ಹೆಂಡತಿ ಹೆಸರಿನಲ್ಲಿ ಸೈಟ್‌ ಪಡೆದಿದ್ದಾರೆ. ಹೀಗೆ ಪಡೆದ ಬದಲಿ ನಿವೇಶನಗಳನ್ನು ಮೊದಲು ವಾಪಸ್‌ ನೀಡಿ ಎಂದು ಒತ್ತಾಯಿಸಿದರು.

   ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಆ ಕೆಲಸ ಮಾಡುವುದು ಬಿಟ್ಟು, ಚಾಮುಂಡಿ ಬೆಟ್ಟಕ್ಕೆ ಪ್ರಾಧಿಕಾರ ರಚನೆ ಸೇರಿದಂತೆ ಅರಮನೆ ವಿಚಾರಕ್ಕೆ ಮುಖ್ಯಮಂತ್ರಿಗಳು ಹೆಚ್ಚಾಗಿ ತಲೆ ಹಾಕುತ್ತಿದ್ದಾರೆ. ಚಾಮುಂಡಿ ಬೆಟ್ಟ ಈಗ ಹೇಗಿದೆಯೋ ಹಾಗೆಯೇ ಇರಲಿ. ನೀವು ಅಧಿಕಾರಕ್ಕೆ ಬಂದಾಗಲೆಲ್ಲಾ ಅರಮನೆ ವಿಚಾರಕ್ಕೆ ಯಾಕೆ ತಲೆ ಹಾಕುತ್ತೀರಿ ಎಂದು ಪ್ರಶ್ನಿಸಿದರು. ಚಾಮುಂಡಿ ಬೆಟ್ಟವನ್ನು ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೋಲಿಸಲು ಸಾಧ್ಯವಿಲ್ಲ ಎಂದರು. ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಅವರು ಈ ಹಿಂದೆ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿಯೂ ಅರಮನೆ ವಿಚಾರದಲ್ಲಿ ಮೂಗು ತೂರಿಸಿದ್ದಾರೆ ಎಂದು ಆರೋಪಿಸಿದರು.