ಪದವಿ ಪ್ರವೇಶಾತಿಗೆ ಷರತ್ತಿನ ಅವಕಾಶ ಕಲ್ಪಿಸಿದ ವಿವಿ

ತುಮಕೂರು:

ವಿದ್ಯಾರ್ಥಿಗಳ ಸಮಸ್ಯೆಗೆ ಮಿಡಿದ ಪ್ರಜಾಪ್ರಗತಿ ವರದಿಯ ಫಲಶೃತಿ

ನೀಟ್, ಸಿಇಟಿಯಲ್ಲಿ ಅವಕಾಶ ಸಿಗದೇ ಪದವಿ ಓದಬೇಕೆಂದಿದ್ದ ವಿದ್ಯಾರ್ಥಿಗಳಿಗಿದ್ದ ಪ್ರವೇಶಾತಿ ತೊಡಕು ಬಗೆಹರಿದಿದೆ. ನ.17 ರಂದು ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನೀಟ್, ಸಿಇಟಿ ವಿದ್ಯಾರ್ಥಿಗಳಿಗೆ ಪದವಿ ಬಾಗಿಲು ಬಂದ್? ಶೀರ್ಷಿಕೆಯ ಸಮಗ್ರ ವರದಿಗೆ ಎಚ್ಚೆತ್ತು ತುಮಕೂರು ವಿವಿಯು ಈ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಠಿಯಿಂದ ಮೊದಲ ವರ್ಷದ ಪದವಿ ಪ್ರವೇಶಾತಿ ದಿನಾಂಕವನ್ನು ಇದೇ ನ.23 ರವರೆಗೆ ವಿಸ್ತರಿಸಿ ತನ್ನ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಗುರುವಾರ ತುರ್ತು ಸುತ್ತೋಲೆ ಹೊರಡಿಸಿದೆ. ಪ್ರವೇಶ ಸಿಗದ ವಿದ್ಯಾರ್ಥಿಗಳನ್ನು ಷರತ್ತಿಗೊಳಪಡಿಸಿ ದಾಖಲಾತಿ ಮಾಡಿಕೊಳ್ಳಬಹುದೆಂದು ಕುಲಪತಿಗಳ ಅನುಮೋದನೆಯ ಮೇರೆಗೆ ಶೈಕ್ಷಣಿಕ ಉಪ ಕುಲಸಚಿವರು ಸುತ್ತೋಲೆ ಹೊರಡಿಸಿ ವಿವಿ ವ್ಯಾಪ್ತಿಯ ಎಲ್ಲಾ ಸಂಯೋಜಿತ ಕಾಲೇಜುಗಳಿಗೆ ಸ್ಪಷ್ಟಪಡಿಸಿದ್ದಾರೆ.

ವಿವಿಯ ಷರತ್ತುಗಳೇನು…? :

ಪದವಿಗೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಯು 200 ರೂ ದಂಡ ಶುಲ್ಕ ಪಾವತಿಸುವುದು., ಶೇ.75 ಕನಿಷ್ಟ ಹಾಜರಾತಿ ಪಡೆಯಲು ಸಾಧ್ಯವಾಗುವಂತೆ ಈಗ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಶನಿವಾರ, ಭಾನುವಾರಗಳಂದು ವಿಶೇಷ ತರಗತಿಗಳನ್ನು ನಡೆಸುವುದು ಹಾಗೂ ಇದಕ್ಕೆ ಪೂರಕ ದಾಖಲೆಗಳನ್ನು ವಿವಿ ಸೂಚಿಸಿದಾಗ ನೀಡುವುದು., ಪ್ರಯೋಗಿಕ ತರಗತಿಗಳನ್ನು ವಿಶೇಷವಾಗಿ ಭಾನುವಾರಗಳಂದು ತಪ್ಪದೇ ನಡೆಸಿ ದಾಖಲೆಗಳನ್ನು ಸಲ್ಲಿಸುವುದು., ಈ ವಿದ್ಯಾರ್ಥಿಗಳ ಪ್ರವೇಶಾತಿ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ನ.24 ರ ಸಂಜೆ 5.30 ರ ಒಳಗೆ ವಿವಿಗೆ ಸಲ್ಲಿಸುವುದು., ಈ ಎಲ್ಲಾ ನಿಬಂಧನೆಗಳನ್ನು ಪಾಲಿಸಿ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ನೀಡಲು ಬಯಸುವ ಕಾಲೇಜುಗಳು ಈ ಕುರಿತು ಮುಚ್ಚಳಿಕೆ ಪತ್ರವನ್ನು ನೀಡುವ ಷರತ್ತಿಗೊಳಪಟ್ಟು ಪ್ರವೇಶಾತಿಯನ್ನು ನೀಡಬಹುದಾಗಿದೆ ಎಂದು ವಿವಿ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಪತ್ರಿಕೆಯ ಕಾರ್ಯಕ್ಕೆ ಶ್ಲಾಘನೆ :

ನೀಟ್, ಸಿಇಟಿಯಲ್ಲಿ ಅವಕಾಶ ಸಿಗದವರಿಗೆ ಈಗ ಪದವಿ ಪ್ರವೇಶಾತಿ ಸುಗಮವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ಅರಿತು ಸಮಸ್ಯೆಯನ್ನು ಕುರಿತು ವರದಿ ಮಾಡಿದ ಪ್ರಜಾಪ್ರಗತಿಯ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದು, ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಿದ ವಿವಿಯ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಸಡ್ಡೆಬೇಡ, ಬೇಗ ದಾಖಲಾಗಿ :

ತಾಂತ್ರಿಕ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‍ಗಳಲ್ಲಿ ಅವಕಾಶ ಸಿಗದ ವಿದ್ಯಾರ್ಥಿಗಳು ತಮ್ಮ ನೀಟ್, ಸಿಇಟಿ ಫಲಿತಾಂಶ ಬಂದು ತಿಂಗಳುಗಳೇ ಕಳೆದರೂ ಪದವಿಗೆ ಶೀಘ್ರ ಪ್ರವೇಶಾತಿ ಪಡೆಯದಿದ್ದಕ್ಕೆ ಪ್ರಜ್ಞಾವಂತ ವಲಯದಲ್ಲಿ ಟೀಕೆಗಳು ಕೇಳಿಬಂದಿದ್ದವು. ಈಗ ವಿವಿಯು ಪದವಿ ಪ್ರವೇಶಕ್ಕೆ 5 ದಿನ ಅವಕಾಶ ಮಾಡಿಕೊಟ್ಟಿದ್ದು, ಇರುವ ಕಡಿಮೆ ಅವಧಿಯಲ್ಲಾದರೂ ಪದವಿ ಪ್ರವೇಶ ಸಿಗದ ಎಲ್ಲಾ ವಿದ್ಯಾರ್ಥಿಗಳು ಅಸಡ್ಡೆ ತೋರದೆ ಬೇಗ ದಾಖಲಾಗಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap