
ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿ ಒಳಸಂಚು ನಡೆದಿದೆ ಎಂದು ಆರೋಪಿಸಿರುವ ಪ್ರಮುಖ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ ರಾಜಧಾನಿಯಲ್ಲಿ ತನ್ನ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಬಿಕ್ಕಟ್ಟಿನ ಕುರಿತು ಚರ್ಚಿಸಲು ರಾಷ್ಟçಪತಿ ದ್ರೌಪದಿ ಮುರ್ಮು ಅವರೊಂದಿಗೆ ತುರ್ತು ಸಭೆಗೆ ಅವಕಾಶ ನೀಡುವಂತೆ ನಾಯಕರು ಪಟ್ಟು ಹಿಡಿದಿದ್ದಾರೆ.
ಗುರುವಾರ ಸಿಇಸಿ ವಿರುದ್ಧ ಪ್ರತಿಭಟಿಸಲು ರಾಜ್‌ಘಾಟ್‌ಗೆ ತೆರಳುವ ಮುನ್ನ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕನ್ನಾಟ್ ಪ್ಲೇಸ್‌ನ ‘ಮೋಟ್ಸ್’ ರೆಸ್ಟೋರೆಂಟ್‌ನಲ್ಲಿ ಮೈತ್ರಿಕೂಟದ ಸಂಸದರು ಮತ್ತು ನಾಯಕರಿಗೆ ವಿಶೇಷ ಭೋಜನಕೂಟ ಏರ್ಪಡಿಸಿದ್ದರು. ಸತತ ಎರಡನೇ ದಿನ ನಡೆದ ಈ ಸಭೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು. ಅಲ್ಲದೆ, ಟಿಎಂಸಿ, ಎಸ್‌ಪಿ, ಸಿಪಿಐ(ಎಂ), ಸಿಪಿಐ, ಆರ್ಜೆಡಿ, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಸಿಪಿ) ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.
ರಸ್ತೆಯಲ್ಲೇ ಧರಣಿ, ಪೊಲೀಸರ ವಿರುದ್ಧ ಆಕ್ರೋಶ: ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಅನುಮತಿ ನಿರಾಕರಿಸಿದ್ದಲ್ಲದೆ, ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅಧಿಕಾರದಲ್ಲಿರುವ ಶಕ್ತಿಗಳು ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ. ವಿರೋಧ ಪಕ್ಷದ ನಾಯಕರನ್ನು ರಸ್ತೆಯಲ್ಲಿ ಎಳೆದಾಡುವುದು ಅರಾಜಕತೆಯ ಸಂಕೇತ” ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರವಷ್ಟೇ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ವಿಪಕ್ಷ ನಾಯಕರನ್ನು ತಡೆದಾಗ ತಳ್ಳಾಟ-ನೂಕಾಟ ನಡೆದಿತ್ತು. ಪ್ರಿಯಾಂಕಾ ಗಾಂಧಿ ರಸ್ತೆಯಲ್ಲೇ ಮಲಗಿ ಸಂವಿಧಾನದ ಪ್ರತಿ ಹಿಡಿದು ಧರಣಿ ನಡೆಸಿದರೆ, ರಾಹುಲ್ ಗಾಂಧಿ ಬ್ಯಾರಿಕೇಡ್ ಹತ್ತಿ ಆಕ್ರೋಶ ವ್ಯಕ್ತಪಡಿಸಿದ್ದರು. “ಇದು ದೇಶದ ಅತ್ಯಂತ ಪವಿತ್ರವಾದ ವ್ಯವಸ್ಥೆಯನ್ನು ರಕ್ಷಿಸುವ ಹೋರಾಟ. ಸಿಇಸಿ ರಾಜೀನಾಮೆ ನೀಡುವವರೆಗೂ ನಾವು ಹಿಂದೆ ಸರಿಯುವುದಿಲ್ಲ” ಎಂದು ರಾಹುಲ್ ಗಾಂಧಿ ಮತ್ತು ಮೈತ್ರಿಕೂಟದ ಇತರೆ ನಾಯಕರು ಸ್ಪಷ್ಟಪಡಿಸಿದ್ದಾರೆ.
ರಾಷ್ಟçಪತಿ ಭೇಟಿಗೆ ಕಾಯುತ್ತಿರುವ ನಾಯಕರು:
ಈ ಬಿಕ್ಕಟ್ಟಿನ ಮಧ್ಯೆ, ‘ಇಂಡಿಯಾ’ ಮೈತ್ರಿಕೂಟವು ರಾಷ್ಟçಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ನಿರಂತರ ಪ್ರಯತ್ನ ನಡೆಸುತ್ತಿದೆ. “ಅಕ್ಟೋಬರ್ ೨ ರಂದು ಮೊದಲ ಮನವಿ ಸಲ್ಲಿಸಲಾಗಿತ್ತು. ನಂತರ ರಾಷ್ಟçಪತಿ ಭವನದ ಸೂಚನೆಯಂತೆ ಅಕ್ಟೋಬರ್ ೫ ರಂದು ನಾಯಕರ ಹೆಸರುಗಳನ್ನೊಳಗೊಂಡ ಪಟ್ಟಿಯೊಂದಿಗೆ ಭೇಟಿಗೆ (ಅ. ೭, ೮ ಅಥವಾ ೯ ರಂದು) ಸಮಯ ಕೋರಲಾಗಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ನಾವು ನಾಳೆಯೂ ಕಾಯುತ್ತೇವೆ” ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ರಾಹುಲ್, ಪ್ರಿಯಾಂಕ ಗಾಂಧಿ ವಿರುದ್ಧ ೩ ಎಫ್‌ಐಆರ್
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ನಡೆದಿದೆ ಎನ್ನಲಾದ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ಕಾರ್ಯಕರ್ತರ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಒಟ್ಟು ೯೧ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಬರಾಖಂಬಾ ರಸ್ತೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪ್ರತಿಭಟನಾಕಾರರು ಮುಂದೆ ಸಾಗದಂತೆ ಪೊಲೀಸರು ತಡೆದಾಗ, ಬ್ಯಾರಿಕೇಡ್‌ಗಳನ್ನು ಹತ್ತಿ ಒಳನುಗ್ಗಲು ಪ್ರಯತ್ನಿಸುತ್ತಿರುವುದು ಕಂಡುಬAದಿತು. ವಶಕ್ಕೆ ಪಡೆದಾಗ ಮಾಧ್ಯಮಗಳತ್ತ ಕೈಬೀಸಿ, ವಿಜಯದ ಸಂಕೇತವನ್ನು (ವಿಕ್ಟರಿ ಸೈನ್) ತೋರಿಸಿದರು.







