ನೋಯ್ಡಾ:
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ, ರೈತರಿಗೆ ಪಿಂಚಣಿ ಮತ್ತು ಬೆಳೆ ವಿಮೆ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾರ್ಲಿಮೆಂಟ್ ನತ್ತ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ಸಾಗುತ್ತಿದೆ. ಸಾವಿರಾರು ರೈತರು ಮತ್ತು ಹಳ್ಳಿಗರು ಮೆರವಣಿಗೆಯಲ್ಲಿ ತೆರಳುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ-ನೋಯ್ಡಾ ಗಡಿ ಬಂದ್ ಮಾಡಲಾಗಿದೆ.
ದೆಹಲಿಯೊಂದಿಗಿನ ಗಡಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ನೋಯ್ಡಾ ಗಡಿಯಲ್ಲಿ ಸಶಸ್ತ್ರ ಪಡೆ ನಿಯೋಜನೆ ಮೂಲಕ ಬಿಗಿ ಬಂದೋಬಸ್ತ್ ಮಾಡಲಾಗಿದೆ. 24 ಗಂಟೆಗಳ ಕಾಲ ಗಡಿಯನ್ನು ಮುಚ್ಚಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ತಡೆಯಲು ಮಯೂರು ವಿಹಾರ್ ಬಳಿಯ ದೆಹಲಿ-ನೋಯ್ಡ ಗಡಿಯ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲು ಭಾರಿ ಶಸಾಸ್ತ್ರಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದರಿಂದ ವಾಹನ ಸವಾರರು ಗಂಟೆಗಟ್ಟಲೇ ತೆವಳುತ್ತಾ ಸಾಗುವಂತಾಯಿತು.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತೀಯ ಕಿಸಾನ್ ಸಭಾ ಸಂಘಟನೆಗಳ ಕಾರ್ಯಕರ್ತರು ಗುರುವಾರ ನೋಯ್ಡಾ ಸೆಕ್ಟರ್ 24 ರ ಎನ್‌ಟಿಸಿಪಿ ಕಚೇರಿ ಮತ್ತು ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯ ಹೊರಗೆ ಜಮಾಯಿಸಿ, ಶೇ 10 ರಷ್ಟು ಗೋಮಾಳ ಭೂಮಿಗೆ ಒತ್ತಾಯಿಸಿದರು. ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಮಧ್ಯಾಹ್ನ ಗ್ರೇಟರ್ ನೋಯ್ಡಾದಲ್ಲಿ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡರು.
ಈ ಮಧ್ಯೆ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ನಿತ್ಯಾನಂದ ರೈ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಂಜೆ 6 ಗಂಟೆಗೆ ಚಂಡೀಗಢದಲ್ಲಿ ಪ್ರತಿಭಟನಾ ನಿರತ ರೈತರ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.