ನವದೆಹಲಿ:
ಆಪಾದಿತ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ಜೂನ್ 19ಕ್ಕೆ ನಿಗದಿಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಇ.ಡಿ ಕಾಲಾವಕಾಶ ಕೋರಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮುಖೇಶ್ ಕುಮಾರ್ ಪ್ರಕರಣವನ್ನು ಮುಂದೂಡಿದರು.
ಈಮಧ್ಯೆ, ತಮ್ಮ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಮೌಲ್ಯಮಾಪನಕ್ಕಾಗಿ ಸ್ಥಾಪಿಸಲಾದ ವೈದ್ಯಕೀಯ ಮಂಡಳಿಯ ಸಭೆಗಳಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ಪತ್ನಿ ಭಾಗವಹಿಸಲು ಅವಕಾಶ ನೀಡುವಂತೆ ಕೋರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಶನಿವಾರ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.
ಆರೋಪಿಯು ತನ್ನ ಪತ್ನಿಯು ವೈದ್ಯಕೀಯ ಮಂಡಳಿಯ ಸಭೆಗಳಳ್ಲಿ ಭಾಗವಹಿಸಲು ಅವಕಾಶ ಕೋರಿ ನಿರ್ದೇಶನ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಆದೇಶವನ್ನು ಹೊರಡಿಸುವ ಮೊದಲು ಸಂಬಂಧಪಟ್ಟ ಜೈಲು ಅಧೀಕ್ಷಕರಿಂದ ಪ್ರತಿಕ್ರಿಯೆ ಕೇಳುವುದು ಸೂಕ್ತವೆಂದು ನಾನು ಭಾವಿಸುತ್ತೇನೆ. ಅರ್ಜಿಯನ್ನು ನಾಳೆಗೆ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಾಧೀಶರು ತಿಳಿಸಿದರು.
ವಿಚಾರಣೆಯ ಸಂದರ್ಭದಲ್ಲಿ, ಜೂನ್ 25ಕ್ಕೆ ಪ್ರಕರಣವನ್ನು ಮುಂದೂಡುವಂತೆ ಇ.ಡಿ ನ್ಯಾಯಾಲಯಕ್ಕೆ ಮನವಿ ಮಾಡಿತು. ಆದರೆ, ಮುಂದಿನ ವಿಚಾರಣೆಯ ದಿನಾಂಕ ನಿಗಧಿಪಡಿಸುವಲ್ಲಿ ಆರೋಪಿಯ ಅನುಕೂಲವನ್ನು ಪರಿಗಣಿಸಲಾಗುವುದು ಹೊರತು, ತನಿಖಾ ಸಂಸ್ಥೆಯನ್ನಲ್ಲ ಎಂದು ನ್ಯಾಯಾಧೀಶರು ಹೇಳಿದರು.
‘ಆರೋಪಿಯು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ನಿಮ್ಮ (ಇ.ಡಿ) ಕಸ್ಟಡಿಯಲ್ಲಿಲ್ಲ. ಅವರು ಸ್ವಲ್ಪ ಅನುಕೂಲವನ್ನು ಬಯಸಿದರೆ, ಅದರಲ್ಲಿ ನಿಮ್ಮ ಯಾವುದೇ ಪಾತ್ರವಿರುವುದಿಲ್ಲ. ನೀವು ಯಾವುದೇ ಪಾತ್ರವನ್ನು ವಹಿಸುವಂತಿಲ್ಲ. ಹೀಗಾಗಿ, ನ್ಯಾಯಾಂಗ ಬಂಧನದಲ್ಲಿರುವ ಅವರ ಅನುಕೂಲವನ್ನು ನಾನು ಪರಿಗಣಿಸುತ್ತೇನೆ. ನಿಮ್ಮದಲ್ಲ’ ಎಂದು ನ್ಯಾಯಾಧೀಶರು ಹೇಳಿದರು.
ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯವು ಜೂನ್ 5 ರಂದು ವಜಾಗೊಳಿಸಿತ್ತು. ಆದರೆ, ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್ ಅವರ ವೈದ್ಯಕೀಯ ಅಗತ್ಯಗಳನ್ನು ನೋಡಿಕೊಳ್ಳುವಂತೆ ನ್ಯಾಯಾಧೀಶರು ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು.
