ನವದೆಹಲಿ:
ಕಾಲ್ಕಾಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ರಮೇಶ್ ಬಿಧುರಿ ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿದ್ದು, ಭಾರೀ ವೈರಲ್ ಆಗಿತ್ತು. ಇದೀಗ ಅವರು ಮತ್ತೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದು, ದೆಹಲಿ ಸಿಎಂ ಅತಿಶಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಮೇಶ್ ಬಿಧುರಿ ಮರ್ಲೆನಾ ಆಗಿದ್ದ ಅತಿಶಿ ಈಗ ಸಿಂಗ್ ಆಗಿದ್ದಾಳೆ. ಆಕೆ ತನ್ನ ತಂದೆಯನ್ನೂ ಬದಲಾಯಿಸಿದ್ದಾಳೆ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷ ಸುಳ್ಳಿನ ಮೇಲೆ ನಿಂತಿದೆ. ಈ ಹಿಂದೆ ಕೇಜ್ರಿವಾಲ್ ತನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಭ್ರಷ್ಟ ಕಾಂಗ್ರೆಸ್ ಜೊತೆ ಸೇರುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಮೈತ್ರಿಯಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.
2001ರ ಸಂಸತ್ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್ ಗುರುವಿನ ಮರಣದಂಡನೆ ವಿರುದ್ಧ ಅತಿಶಿಯ ಪೋಷಕರು ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು ಎಂದು ಬಿಧುರಿ ಹೇಳಿದ್ದಾರೆ. ಒಬ್ಬ ಉಗ್ರನ ಮರಣದಂಡನೆಗಾಗಿ ಕ್ಷಮಾಪಣೆ ಕೇಳಿದವರನ್ನು ಬೆಂಬಲಿಸಲು ಬಯಸುವಿರಾ ಎಂದು ನಾನು ದೆಹಲಿಯ ಜನರನ್ನು ಕೇಳಲು ಬಯಸುತ್ತೇನೆ ಎಂದು ಪ್ರಶ್ನಿಸಿದರು.
ಬಿಧುರಿ ಅವರ ವಿವಾದಾತ್ಮಕ ಹೇಳಿಕೆಯ ಕುರಿತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ. “ಬಿಜೆಪಿ ನಾಯಕರಿಗೆ ನಾಚಿಕೆಯಿಲ್ಲ. ಅವರು ಎಲ್ಲ ಮಿತಿಗಳನ್ನು ದಾಟಿದ್ದಾರೆ. ಅವರು ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ನಿಂದಿಸುತ್ತಿದ್ದಾರೆ. ಮಹಿಳಾ ಮುಖ್ಯಮಂತ್ರಿಯ ಅವಮಾನವನ್ನು ದೆಹಲಿಯ ಜನರು ಎಂದಿಗೂ ಸಹಿಸುವುದಿಲ್ಲ. ದೆಹಲಿಯ ಎಲ್ಲಾ ಮಹಿಳೆಯರು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ಕೇಜ್ರಿವಾಲ್ ಹೇಳಿದರು.
ಎಎಪಿ ವಕ್ತಾರ ಪ್ರಿಯಾಂಕಾ ಕಕ್ಕರ್ ಕೂಡ ಬಿಧುರಿ ವಿರುದ್ಧ ವಾಗ್ದಾಳಿ ನಡೆಸಿ ” ಒಂದು ವೇಳೆ ತಪ್ಪಾಗಿ ರಮೇಶ್ ಬಿಧುರಿ ಶಾಸಕರಾದರೆ ಮಹಿಳೆಯರ ವಿರುದ್ಧ ಯಾವ ರೀತಿಯ ಧೋರಣೆ ಹೊಂದುತ್ತಾರೆ ಎಂಬುದನ್ನು ನೀವೆ ಊಹಿಸಿ ಎಂದು ಹೇಳಿದ್ದಾರೆ. ಸಾರ್ವಜನಿಕರು ಅರವಿಂದ್ ಕೇಜ್ರಿವಾಲ್‌ಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ರಮೇಶ್ ಬಿಧುರಿ ದೆಹಲಿಯಿಂದ ಬಹಳ ದೊಡ್ಡ ಅಂತರದಿಂದ ಸೋಲುತ್ತಾರೆ. ದೆಹಲಿಯ ಮಹಿಳೆಯರು ಸೇಡು ತೀರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
