ಹಾಸನ : ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ

ಹಾಸನ: 

   ಹಾಸನ ಜೆಡಿಎಸ್ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ಪೆನ್​ ಡ್ರೈವ್ ಪ್ರಕರಣದಲ್ಲಿ ನಿನ್ನೆ ವಶಕ್ಕೆ ಪಡೆದಿದ್ದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

    ಮಹಿಳೆ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದಲ್ಲಿ ಹೊಳೆನರಸೀಪುರ ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಸತತ ಮೂರು ಗಂಟೆಗಳ ವಿಚಾರಣೆ ನಡೆಸಿ ಬಂಧಿಸಿದ್ದಾರೆ. 

    ನಿನ್ನೆ ಚಿತ್ರದುರ್ಗ ಬಳಿಯ ಕೆ.ಆರ್. ಹಳ್ಳಿ ಗೇಟ್ ಬಳಿ ಹಿರಿಯೂರು ಗ್ರಾಮಾಂತರ ಪೊಲೀಸರು ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಹೊಳೆ ನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕೇಸ್ ಗಳ ಸಂಬಂಧ ಅವರನ್ನು ವಶಕ್ಕೆ ಪಡೆಯಲಾಗಿತ್ತು.

    ವಕೀಲರಾಗಿರುವ ದೇವರಾಜೇಗೌಡ ವಿರುದ್ಧ ಏಪ್ರಿಲ್ 1ರಂದು ಹೊಳೆನರಸೀಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರು ಪ್ರಮುಖ ಮಾಹಿತಿದಾರರಾದ್ದರಿಂದ ಅದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕಳೆದ ವರ್ಷ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡರು, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. 

    2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ತಂದೆ ಮತ್ತು ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ದೇವರಾಜೇಗೌಡ, ಲೈಂಗಿಕ ಕಿರುಕುಳದ ವೀಡಿಯೊಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.

   ಹಾಸನ ಜಿಲ್ಲೆಯ 36 ವರ್ಷದ ಮಹಿಳೆಯೊಬ್ಬರು ತಮ್ಮ ಆಸ್ತಿ ಮಾರಾಟಕ್ಕೆ ಸಹಾಯ ಮಾಡುವ ನೆಪದಲ್ಲಿ ದೇವರಾಜೇಗೌಡ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೆದರಿಸಿ ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ವೀಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ. ವೀಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಮಹಿಳೆ‌ ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap