ದೇವರಹೊಸಹಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿದ ವೀರಭದ್ರ ಸ್ವಾಮಿ ಜಾತ್ರೆ

ದಾಬಸ್ ಪೇಟೆ:

     ನೆಲಮಂಗಲ ತಾಲ್ಲೂಕಿನ ಸುಪ್ರಸಿದ್ದ ದೇವರ ಹೊಸಹಳ್ಳಿಯ ಶ್ರೀ ವೀರಭದ್ರಸ್ವಾಮಿಯ ರಥೋತ್ಸವನ್ನು ಗುರುವಾರ ಮಧ್ಯಾಹ್ನ ೧:೩೦ ಗಂಟೆಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮುಖದಲ್ಲಿ ಆಚರಿಸಲಾಯಿತು. ಶ್ರೀ ಭದ್ರಕಾಳಮ್ಮನವರ ಸಮೇತ ಶ್ರೀ ವೀರಭದ್ರ ಸ್ವಾಮಿ ಉತ್ಸವಮೂರ್ತಿಯನ್ನು ೪೦ ಅಡಿ ಎತ್ತರದ ರಥದಲ್ಲಿ ಪ್ರತಿಷ್ಟಾಪಿಸಿ ಜನರು ತೇರನ್ನು ಎಳೆದು ಬಾಳೆಹಣ್ಣು ದವನವನ್ನು ತೇರಿನ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.

      ಪ್ರತೀತಿಯಂತೆ ಅದ್ದೂರಿ ರಥೋತ್ಸವ ನೆರವೇರಿದ್ದು, ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ನೆಲಮಂಗಲ ತಾಲ್ಲೂಕಿನಲ್ಲಿ ಅತೀ ಜನಪ್ರಿಯ ಹಾಗೂ ಹೆಚ್ಚು ಭಕ್ತರನ್ನು ಹೊಂದಿರುವ ದೇವಾಲಯವಿದಾಗಿದ್ದು ಜನರೇ ಅನೇಕ ಸೇವೆಗಳನ್ನು ಮಾಡುತ್ತಾರೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿನ ಭಕ್ತರು ಸುಮಾರು ೫೦ಕ್ಕೂ ಅಧಿಕ ಅರವಂಟಿಕೆಗಳನ್ನು ತೆರೆದು ಹೆಸರುಬೇಳೆ, ಪಾನಕ, ಮಜ್ಜಿಗೆ, ವಿಧ ವಿಧದ ಊಟದ ವ್ಯವಸ್ಥೆಯನ್ನು ಭಕ್ತಾದಿಗಳಿಗೆ ನೀಡಿದರು. ಮುಂದಿನ ಮಂಗಳವಾರದವರೆಗೂ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು ನಿತ್ಯ ಭಕ್ತರು ಭಾಗಿಯಾಗಿ ತಮ್ಮ ಭಕ್ತಿ ಸಮರ್ಪಿಸಲಿದ್ದಾರೆ.

    ಸಾವಿರಾರು ಭಕ್ತರು: ಭಕ್ತರು ಜಾತ್ರೆಗೆ ಆಗಮಿಸಿ ಭಕ್ತಿಯಿಂದ ರಥವನ್ನು ಎಳೆದು ತಮ್ಮ ಹರಕೆ ತೀರಿಸಿದರು. ಬೆಂಗಳೂರು, ಗ್ರಾಮಾಂತರ, ರಾಮನಗರ, ತುಮಕೂರು ಸೇರಿ ವಿವಿಧ ಜಿಲ್ಲೆಗಳ ಐವತ್ತು ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು.

     ಭಿಗಿ ಭದ್ರತೆ: ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದಾಬಸ್ ಪೇಟೆ ಠಾಣೆ ಇನ್ಸ್ ಪೆಕ್ಟರ್ ರಾಜು ನೇತೃತ್ವದಲ್ಲಿ ೧೫೦ಕ್ಕೂ ಹೆಚ್ಚು ಪೋಲೀಸರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು ಜೊತೆಗೆ ಡ್ರೋಣ್ ಕಣ್ಗಾವಲಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣನ್ನು ಹಿಡಲಾಗಿತ್ತು.

    ಗಮನ ಸೆಳೆದ ದ್ವಾರಬಾಗಿಲು: ಜಾತ್ರೆ ಪ್ರಯುಕ್ತ ಕಳೆದ ವರ್ಷ ಭಕ್ತರ ಸಹಕಾರದಿಂದ ಪ್ರಾರಂಭವಾಗಿದ್ದ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ದ್ವಾರ ಬಾಗಿಲು ನಿರ್ಮಾಣ ಕಾರ್ಯ ಪೂರ್ಣಗೊಂಡು ವೀರಭದ್ರ ಸ್ವಾಮಿಯ ಮೆರವಣಿಗೆ ದೇವರನ್ನು ಹೊತ್ತು ತಂದು ಉದ್ಘಾಟನೆ ಮಾಡಲಾಗಿದ್ದು ಭಕ್ತರ ಗಮನ ಸೆಳೆಯಿತು.

     ವಿವಿಧ ಕಾರ್ಯಕ್ರಮಗಳು: ಮಾ.೨೧ರಂದು ಚಂದ್ರಮAಡಲ, ಗಜವಾಹನ ಪೂಜೆ, ನವೀನ ಮಂಟಪ, ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಮಾ.೨೨ರಂದು ರಾವಣೋತ್ಸವ, ಸರ್ಪವಾಹನ, ರುದ್ರಾಕ್ಷಿ ಮಂಟಪೋತ್ಸವ, ಮಾ.೨೩ರಂದು ತಿರುಗಣಿ ವಾಹನ ಸಿಂಹವಾಹನ ಮತ್ತು ಸೂರ್ಯಮಂಡಲ, ಮಾ.೨೪ರಂದು ಹೂವಿನ ಮಂಟಪ ನಂದಿವಾಹನ ವೃಸಭ ವಾಹನ, ಮಾ.೨೫ರಂದು ವಸಂತೋತ್ಸವ ನಡೆಯಲಿದೆ.

     ಈ ಸಂದರ್ಭದಲ್ಲಿ ಮುಜುರಾಯಿ ಕಾರ್ಯನಿರ್ವಾಹಣಾಕಾರಿ ಬೃಂದಾ , ಉಪತಹಸೀಲ್ದಾರ್ ಶಶಿಧರ್, ರಾಜಸ್ವನಿರೀಕ್ಷಕರಾದ ಸುಂದರ್ ರಾಜ್ , ಮುನಿರಾಜು, ಅರ್ಚಕರಾದ ಜಗಜ್ಯೋತಿ ಬಸವೇಶ್ವರ, ಸತೀಶ್, ಫಣಿಭೂಷಣ್, ಪಾರುಪತ್ತೇದ್ವಾರ್ ಪ್ರಭುದೇವ್, ಶ್ರೀ ನಿವಾಸ್, ಗ್ರಾಮಲೆಕ್ಕಿಗರಾದ ಬಾಲಕೃಷ್ಣ, ರೋಹಿತ್ ಸೇರಿದಂತೆ ಹಲವರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.