ಬೆಂಗಳೂರು
ಮಹದಾಯಿ ನದಿ ನೀರಿಗಾಗಿ ನಾವೆಲ್ಲರೂ ಪಕ್ಷಭೇದ ಮರೆತು ಹೋರಾಟ ಮಾಡಬೇಕಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲರೂ ಹೋರಾಟ ಮಾಡಬೇಕು. ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಲು ಶಕ್ತಿಮೀರಿ ಹೋರಾ ಮಾಡೋಣ. ನಾನು ಇನ್ನು 4-5 ವರ್ಷ ಬದುಕಿರುತ್ತೇನೆ, ನನ್ನ ಕೊನೆ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದಾಯಿ ಯೋಜನೆ ವಿವಾದ ನ್ಯಾಯಾಲಯದಲ್ಲಿದೆ. ಕಳಸಾ ಬಂಡೂರಿಯಿಂದ 3.5 ಟಿಎಂಸಿ ನೀರು ಬಿಡಲು ಗೋವಾ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಅದಕ್ಕೆ ನಮ್ಮ ಸರ್ಕಾರ ಪ್ರತಿಭಟನೆ ಮಾಡಿ ಅರ್ಜಿ ಹಾಕಿದೆ. ವಿವಾದ ಕೋರ್ಟ್ನಲ್ಲಿರುವಾಗ ಪ್ರಧಾನಿ ಏನು ಮಾಡುತ್ತಾರೆ. ಹಾಗಾಗಿ ನಮ್ಮವರು ಕೋರ್ಟ್ನಲ್ಲಿ ಪ್ರಬಲ ವಾದ ಮಾಡಬೇಕು. ನಾವೆಲ್ಲ ಪಕ್ಷಭೇದ ಮರೆತು ಹೋರಾಟ ಮಾಡಬೇಕು ಎಂದು ಕರೆ ಕೊಟ್ಟರು.
25 ಟಿಎಂಸಿ ನೀರು ಕರ್ನಾಟಕಕ್ಕೆ ಕೊಡಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದೇನೆ. ಮಹದಾಯಿ ಯೋಜನೆಗೆ ಗೋವಾ ಮತ್ತು ಪರಿಸರದ ಸಮಸ್ಯೆ ಇದೆ. ಅದಕ್ಕೆ ಕೊಡಲು ಆಗಲ್ಲ ಅಂತ ಹೇಳಿದ್ದಾರೆ. ಕುಡಿಯುವ ನೀರಿಗಾಗಿ ನಮ್ಮ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಹೋರಾಟ ಮಾಡುತ್ತಿದೆ. ಎತ್ತಿನಹೊಳೆ ಯೋಜನೆಗೆ ₹8 ಸಾವಿರ ಕೋಟಿ ಮಂಜೂರು ಮಾಡಿದರೂ. ಈಗ 25 ಸಾವಿರ ಕೋಟಿ ನೀಡಿದ್ದಾರೆ, ಅದು ಎಲ್ಲಿವರೆಗೆ ಬಂದಿದೆ ಗೊತ್ತಿಲ್ಲ. ಎಲ್ಲಿಯವರೆಗೆ ಯೋಜನೆ ಆಗಿದೆ, ಅಲ್ಲಿಯವರೆಗೆ ನೋಡಿಕೊಂಡು ಬರೋಣ ಎಂದರು.
ಗೋದಾವರಿ, ಕೃಷ್ಣಾ, ಕಾವೇರಿ ನದಿಗಳ ಜೋಡಣೆಗೆ ಮನವಿ ಮಾಡುತ್ತೇನೆ. ನಮ್ಮ ಪಾಲಿನ ನೀರನ್ನು ಕೊಡಬೇಕೆಂದು ಸಭೆ ಮಾಡುತ್ತೇನೆ. ಸಿದ್ದರಾಮಯ್ಯ ಜತೆ ಮಾತಾಡೋಕೆ ನನಗೆ ಯಾವುದೇ ಆತಂಕ ಇಲ್ಲ. ನೀರಾವರಿ ಮಂತ್ರಿ ಜತೆ ಮಾತಾಡೋಕೆ ತೊಂದರೆ ಇಲ್ಲ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸ್ವಲ್ಪ ಶಕ್ತಿ ನೀಡಿದರೇ ಸ್ಟೀಲ್ ಕಂಪನಿ ಪುನರುಜ್ಜೀವನಕ್ಕಾಗಿ ಹೋರಾಟ ಮಾಡುತ್ತಾರೆ. ಭದ್ರಾವತಿ ಉಕ್ಕಿನ ಕಾರ್ಖಾನೆ ಮತ್ತೆ ಪುನರುಜ್ಜೀವನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ರಾಜಕೀಯ ಸಾಕು, ರಾಜ್ಯದ ಅಭಿವೃದ್ಧಿ ಮಾಡೋಣ. ತಮಿಳುನಾಡಿನವರ ಒಗ್ಗಟ್ಟಿನ ಹೋರಾಟವನ್ನು ನಾವು ಕಲಿಯಬೇಕು ಎಂದು ಹೇಳಿದರು.
