ಹೈದರಾಬಾದ್
ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಸೋಮವಾರ (ನವೆಂಬರ್ 3) ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿ, 8 ಮಂದಿ ಗಾಯಗೊಂಡಿದ್ದಾರೆ . ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತಕ್ಕೀಡಾದ ಬಸ್ ತಂಡೂರ್‌ನಿಂದ ಹೈದರಾಬಾದ್ ಕಡೆಗೆ ತೆರಳುತ್ತಿತ್ತು. ಮೃತಪಟ್ಟವರಲ್ಲಿ ಬಸ್ ಪ್ರಯಾಣಿಕರು, ಬಸ್ ಮತ್ತು ಟಿಪ್ಪರ್ ಚಾಲಕರು ಸೇರಿದ್ದಾರೆ.
1 ವರ್ಷದ ಮಗು ಸೇರಿದಂತೆ 11 ಮಹಿಳೆಯರು ಮತ್ತು 9 ಪುರುಷರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ 24 ಜನರು ಗಾಯಗೊಂಡಿದ್ದು, 5 ಮಂದಿಯ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಪಘಾತಕ್ಕೀಡಾಡ ಸರ್ಕಾರಿ ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು ಎನ್ನಲಾಗಿದೆ. ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಅತಿ ವೇಗದಲ್ಲಿ ಚಲಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದ್ದು, ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಲಾರಿಯ ಜಲ್ಲಿಕಲ್ಲು ಬಸ್ ಮೇಲೆ ಬಿದ್ದು, ಹಲವಾರು ಪ್ರಯಾಣಿಕರು ಅದರಡಿಗೆ ಸಿಲುಕೊಂಡು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಯ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತುರ್ತು ಕಾರ್ಯಾಚರಣೆಯ ತಂಡಗಳು ಸ್ಥಳಕ್ಕೆ ಧಾವಿಸಿವೆ. ಸ್ಥಳೀಯರೂ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.
ಗಾಯಾಳುಗಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವವರನ್ನು ಹೈದರಾಬಾದ್‌ನ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಇನ್ನೂ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಸ್‌ನಲ್ಲಿದ್ದ ಹೆಚ್ಚಿನವರು ವಿದ್ಯಾರ್ಥಿಗಳು ಎನ್ನಲಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅಪಘಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮುಖ್ಯ ಕಾರ್ಯದರ್ಶಿ ಕೆ. ರಾಮಕೃಷ್ಣ ರಾವ್ ಮತ್ತು ಪೊಲೀಸ್ ಮಹಾನಿರ್ದೇಶಕ ಬಿ. ಶಿವಧರ್ ರೆಡ್ಡಿ ಅವರಿಗೆ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ. ಅಪಘಾತದ ಸಂಪೂರ್ಣ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಜತೆಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸಚಿವರಿಗೆ ಹೇಳಿದ್ದಾರೆ. ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಕೆಲ ಹೊತ್ತು ಟ್ರಾಫಿಕ್ ಜಾಮ್ ಕಂಡು ಬಂತು. ಬಳಿಕ ವಾಹನಗಳನ್ನು ಬೇರೆ ಮಾರ್ಗಗಳ ಮೂಲಕ ಕಳುಹಿಸಲಾಯಿತು.
ಕಾರ್ಯಾಚರಣೆಯ ಸಮಯದಲ್ಲಿ ಚೆವೆಲ್ಲಾ ವೃತ್ತ ನಿರೀಕ್ಷಕ ಭೂಪಾಲ್ ಶ್ರೀಧರ್ ಅವರ ಎಡಗಾಲಿಗೆ ಜೆಸಿಬಿ ಡಿಕ್ಕಿ ಹೊಡೆದು ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ರಾಜಸ್ಥಾನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 15 ಮಂದಿ ಮೃತಪಟ್ಟಿದ್ದರು. ಅದರ ಬೆನ್ನಿಗೆ ತೆಲಂಗಾಣದಲ್ಲಿ ಈ ದುರಂತ ಸಂಭವಿಸಿದೆ.








