ತಮಿಳು ನಾಡು :
ಸಿನಿಮಾ ಪ್ರಚಾರಕ್ಕಾಗಿ ನಟ-ನಟಿಯರು, ನಿರ್ದೇಶಕ-ನಿರ್ಮಾಪಕರು ಯಾವ ಹಂತಕ್ಕೆ ಬೇಕಿದ್ದರೂ ಹೋಗುತ್ತಾರೆ. ಕೆಲವೊಮ್ಮೆ ತಮ್ಮ ಜೀವನದಲ್ಲಿ ನಡೆಯದೇ ಇರುವ ಘಟನೆಯನ್ನು ನಡೆದಿದೆ ಎಂದು ಹೇಳಿ ಸಿಂಪತಿ ಗಿಟ್ಟಿಸಿಕೊಳ್ಳುತ್ತಾರೆ. ಈಗ ಧನುಶ್ ಅವರು ಇದೇ ಟ್ರಿಕ್ ಬಳಸಿದರೇ ಎನ್ನುವ ಪ್ರಶ್ನೆ ಮೂಡಿದೆ. ಅವರು ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ‘ಇಡ್ಲಿ ಕಡಾಯಿ’ ಸಿನಿಮಾದ ಈವೆಂಟ್ ನಡೆದಿದೆ. ಇದರಲ್ಲಿ ಧನುಶ್ ನಟಿಸಿದ್ದಾರೆ. ಇಡ್ಲಿ ಖರೀದಿ ಮಾಡಲು ಅವರು ಹೂ ಮಾರಾಟ ಮಾಡುತ್ತಿದ್ದಾಗಿ ಹೇಳಿದ್ದಾರೆ. ಅವರ ಹೇಳಿಕೆ ಬಗ್ಗೆ ಅನೇಕರು ಅನುಮಾನ ಹೊರಹಾಕಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಅವರು ಮಾಡಿರೋ ಟ್ರಿಕ್ ಇದು ಎಂದು ಅನೇಕರು ಹೇಳಿದ್ದಾರೆ.
‘ನಾನು ಬಾಲ್ಯದಲ್ಲಿ ಪ್ರತಿದಿನ ಇಡ್ಲಿ ತಿನ್ನಲು ಹಂಬಲಿಸುತ್ತಿದ್ದೆ. ಆದರೆ ನನಗೆ ಅವುಗಳನ್ನು ಖರೀದಿಸಲು ಹಣ ಇರುತ್ತಿರಲಿಲ್ಲ. ಹೀಗಾಗಿ, ನಾವು ಹೂವುಗಳನ್ನು ಸಂಗ್ರಹಿಸುತ್ತಿದ್ದೆವು. ನಾವು ಎಷ್ಟು ಹೂವನ್ನು ಸಂಗ್ರಹಿಸುತ್ತೇವೆ ಎಂಬುದರ ಆಧಾರದ ಮೇಲೆ ನಮಗೆ ಸಿಗೋ ಹಣ ನಿರ್ಧಾರ ಆಗುತ್ತಿತ್ತು. ನನ್ನ ಜೊತೆ ನನ್ನ ಸಹೋದರಿ, ಸೋದರಸಂಬಂಧಿಗಳು ಇದನ್ನು ಮಾಡುತ್ತಿದ್ದರು’ ಎಂದು ಅವರು ಹೇಳಿದ್ದಾರೆ.
‘ಈ ಕೆಲಸ ಮಾಡಿದ್ದಕ್ಕೆ ನಮಗೆ ತಲಾ 2 ರೂಪಾಯಿ ಸಿಗುತ್ತಿತ್ತು. ನಂತರ, ನಾವು ಸ್ಥಳೀಯ ಪಂಪ್ ಸೆಟ್‌ಗೆ ಹೋಗಿ ಸ್ನಾನ ಮಾಡುತ್ತಿದ್ದೆವು. ಮುಖ್ಯ ರಸ್ತೆಯಲ್ಲಿ ಕೇವಲ ಒಂದು ಟವಲ್‌ನೊಂದಿಗೆ ನಡೆಯುತ್ತಿದ್ದೆವು. ಆ ಹಣಕ್ಕೆ ನಮಗೆ ನಾಲ್ಕರಿಂದ ಐದು ಇಡ್ಲಿಗಳು ಸಿಗುತ್ತಿದ್ದವು. ಕಷ್ಟಪಟ್ಟು ದುಡಿದ ಹಣದಿಂದ ಆಹಾರ ತಿನ್ನುವಾಗ ಸಿಗುವ ತೃಪ್ತಿ ಮತ್ತು ರುಚಿಯನ್ನು ಯಾವುದೂ ಮೀರಿಸಲು ಸಾಧ್ಯವಿಲ್ಲ. ನನ್ನ ಬಾಲ್ಯದಲ್ಲಿ ಅನುಭವಿಸಿದ ಊಟದ ರುಚಿ ಈಗ ನನಗೆ ಸಿಗುತ್ತಿಲ್ಲ’ ಎಂದು ಧನುಶ್ ಹೇಳಿದ್ದಾರೆ.
ಧನುಶ್ ಅವರು ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರ ಮಗ. ಹೀಗಾಗಿ, ಧನುಶ್ ಮಾತುಗಳ ಮೇಲೆ ಅನೇಕರು ಅನುಮಾನ ಹೊರಹಾಕಿದ್ದಾರೆ. ಕಸ್ತೂರಿ ರಾಜ ಅವರು ಧನುಶ್ಗೆ ಹಣವನ್ನೇ ನೀಡುತ್ತಿರಲಿಲ್ಲವೇ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ಸಿಂಪತಿ ಗಳಿಸಿಕೊಳ್ಳೋ ಟ್ರಿಕ್ ಎಂದಿದ್ದಾರೆ. ಇನ್ನೂ ಕೆಲವರು ಧನುಶ್ ಸ್ವಾಭಿಮಾನಿ ಅದಕ್ಕೆ ಈ ರೀತಿ ಮಾಡುತ್ತಿದ್ದರು ಎಂದಿದ್ದಾರೆ.
