ರಾಯಚೂರು
ಅತಿಥಿ ಶಿಕ್ಷಕಿಗೆ ಸಹ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು ಶಿಕ್ಷಕಿ ಸಂಬಂಧಿಕರು ಸಹ ಶಿಕ್ಷಕನ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ಕೊಟ್ಟು ಕ್ಷಮೆ ಕೇಳುವಂತೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಜಿಲ್ಲೆಯ ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಮೆಹಬೂಬ್ ಅಲಿ ಎಂಬುವವರಿಗೆ ಹಿಗ್ಗಾಮುಗ್ಗ ಥಳಿಸಿದ್ದು ಶಿಕ್ಷಕಿಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಲಾಗಿದೆ.
ಸಹ ಶಿಕ್ಷಕ ಮೆಹಬೂಬ್ ಅಲಿ ಅವರು ತಮ್ಮದೇ ಶಾಲೆಯ ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ ಮೆಸೇಜ್ ಮಾಡಿ, ಮಂಚಕ್ಕೆ ಕರೆದಿದ್ದರು. ಈ ಹಿನ್ನೆಲೆ ನಿನ್ನೆ ಶಾಲೆ ಬಳಿ ಬಂದಿದ್ದ ಶಿಕ್ಷಕಿ ಸಂಬಂಧಿಕರು ಮೆಹಬೂಬ್ ಅಲಿ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ನೀಡಿ ಸಭ್ಯತೆಯ ಪಾಠ ಕಳಿಸಿದ್ದಾರೆ. ಸದ್ಯ ಮೆಹಬೂಬ್ ಅಲಿ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಿದ್ದಾರೆ. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ಶಿಕ್ಷಕ ಕ್ಷಮೆಯಾಚಿಸಿದ್ದರಿಂದ ಪೊಲೀಸರಿಗೆ ದೂರು ನೀಡದೇ ಶಿಕ್ಷಕಿ ಸುಮ್ಮನಾಗಿದ್ದಾರೆ. ಇದೀಗ ಶಿಕ್ಷಕ, ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆ ಕೇಳುವ ವಿಡಿಯೋ ವೈರಲ್ ಆಗಿದೆ.