ಉಜಿರೆ:
2012ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಾ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಕೆಲವರು ಅವಹೇಳನಕಾರಿ ಹೇಳಿಕೆ ಜೊತೆಗೆ ವಿಡೀಯೋಗಳನ್ನು ಹಂಚಿಕೊಳ್ಳುತ್ತಿರುವುದನ್ನು ಖಂಡಿಸಿ ಮಾ.27ರಂದು ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಮತ್ತು ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೇಶವ ಗೌಡ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ, ಧರ್ಮಾಧಿಕಾರಿಗಳು, ಕುಟುಂಬ ಸದಸ್ಯರು ಹಾಗೂ ಧರ್ಮಸ್ಥಳದ ಸಂಸ್ಥೆಗಳ ವಿಚಾರದಲ್ಲಿ ನ್ಯಾಯಾಂಗ ನಿಂದನೆ, ಅಪಪ್ರಚಾರ, ಮಾನಹಾನಿ ಹಾಗೂ ಆಧಾರ ರಹಿತ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಆದರೆ ವಾಸ್ತವದಲ್ಲಿ ಸೌಜನ್ಯಾ ಕೊಲೆ ಪ್ರಕರಣಕ್ಕೂ ಧರ್ಮಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ, ಕ್ಷೇತ್ರದಿಂದ ನಡೆಸಲಾಗುತ್ತಿರುವ ಸತ್ಕಾರ್ಯಗಳನ್ನು ಸಹಿಸದ ಹಾಗೂ ಕ್ಷೇತ್ರದ ಏಳಿಗೆಯನ್ನು ಸಹಿಸದ ಕೆಲ ದುಷ್ಟ ಶಕ್ತಿಗಳು ವಿನಾ ಕಾರಣ ಪೂರ್ವಾಗ್ರಹ ಪೀಡಿತರಾಗಿ ಸೌಜನ್ಯಾ ಪ್ರಕರಣವನ್ನು ಮುಂದಿಟ್ಟುಕೊಂಡು ಪವಿತ್ರ ಕ್ಷೇತ್ರವಾದ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಸಂಚು ರೂಪಿಸಿ ಅಪಪ್ರಚಾರ ಮಾಡುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದ್ದು, ಈ ಬೆಳವಣಿಗೆಯನ್ನು ಖಂಡಿಸಿ ಪ್ರತಿಭಟನ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನಲೆ ನಾಳೆ ಗುರುವಾರ ಬೆಳಿಗ್ಗೆ ಹತ್ತು ಗಂಟೆಯಿಂದ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿ ತೇಜೋವಧೆ ಮಾಡುತ್ತಿರುವವರ ಬಗ್ಯೆ ಕಾನೂನು ಕ್ರಮ ಕೈಗೊಳ್ಳುವಂತೆ ಹಕ್ಕೋತ್ತಾಯ ಮಾಡುತ್ತೇವೆ ಎಂದು ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೇಶವ ಗೌಡ ತಿಳಿಸಿದ್ದಾರೆ.
ಹಾಗೇ ಧರ್ಮ ದೈವ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ಗ್ರಾಮಸ್ಥರೆಲ್ಲ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಬಳಿಕ ಪಾದಯಾತ್ರೆ ಮೂಲಕ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ಮೈದಾನಕ್ಕೆ ಹೋಗಿ ಪ್ರತಿಭಟನಾ ಸಭೆ ನಡೆಯಲಿದೆ. ಧರ್ಮಸ್ಥಳದ ಗ್ರಾಮಸ್ಥರು, ಭಕ್ತರು ಹಾಗೂ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆ ಪರವಾಗಿ ಒಕ್ಕೊರಳ ಧ್ವನಿ ಮೊಳಗಿಸಲಿದ್ದೇವೆ ಎಂದಿದ್ದಾರೆ.
ಈ ವೇಳೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲಾ, ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರೀತಂ, ಉಪಾಧ್ಯಕ್ಷ ಅಜಿತ್ ಜೈನ್, ವರ್ತಕರ ಸಂಘದ ಪ್ರತಿನಿಧಿ ಭವಾನಿಶಂಕರ್, ವಾಹನ ಮಾಲಕರು-ಚಾಲಕರ ಪ್ರತಿನಿಧಿ ನೀಲಕಂಠ ಶೆಟ್ಟಿ, ಅಖಿಲೇಶ್, ಶೃತಾಂಜನ ಜೈನ್, ಧನಕೀರ್ತಿ ಆರಿಗಾ, ಶ್ರೀನಿವಾಸ ರಾವ್ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು.
