ಮಂಗಳೂರು
ಧರ್ಮಸ್ಥಳದಲ್ಲಿ ಸಿಕ್ಕಿದ್ದು ಎಂದು ದೇಶವನ್ನೇ ಗದ್ದಲಕ್ಕೆ ದೂಡಿದ್ದ ಬುರುಡೆ ಈಗ ಅನಾಥವಾಗಿದೆ. ಮಾಲೀಕ ಯಾರು ಎಂಬುದೇ ಗೊತ್ತಾಗದ ಸ್ಥಿತಿಯಲ್ಲಿದೆ. ಯಾಕೆಂದರೆ ಆರಂಭದಲ್ಲಿ ಬುರುಡೆ ಜೊತೆಗಿದ್ದವರೆಲ್ಲಾ ಈಗ ಆ ಬುರುಡೆಯನ್ನು ದೂರ ತಳ್ಳುತ್ತಿದ್ದಾರೆ. ಮುಸುಕುಧಾರಿ ಚಿನ್ನಯ್ಯ, ‘ತಲೆಬುರುಡೆಯನ್ನು ನಾನು ಧರ್ಮಸ್ಥಳದಿಂದ ತಂದಿಲ್ಲ. ಇದನ್ನು ನನಗೆ ಕೊಟ್ಟಿದ್ದು ಜಯಂತ್’ ಎಂದು ಎಸ್‌ಐಟಿ ಮುಂದೆ ತಪ್ಪೊಪ್ಪಿಕೊಂಡಿದ್ದ. ಹೀಗಾಗಿ ದೂರುದಾರ ಜಯಂತ್‌ರನ್ನು ವಿಚಾರಣೆಗೆ ಕರೆಸಿ ಎಸ್ಐಟಿ ಫುಲ್ ಗ್ರಿಲ್ ಮಾಡಿತ್ತು. ಆದರೀಗ ಜಯಂತ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ನನಗೆ ಬುರುಡೆ ಕೊಟ್ಟಿದ್ದೇ ಗಿರೀಶ್ ಮಟ್ಟಣ್ಣನವರ್ ಎಂದಿದ್ದಾರೆ. ಹೀಗಾಗಿ ಬುರುಡೆ ಸುತ್ತಿಬಳಸಿ ಕೊನೆಗೆ ಗಿರೀಶ್ ಮಟ್ಟಣ್ಣನವರ್ ಬುಡಕ್ಕೆ ಬಂದುನಿಂತಿದೆ.
ಬುರುಡೆ ಮೂಲ ಕೆದಕಲು ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್‌ರನ್ನು ಶುಕ್ರವಾರ ವಿಚಾರಣೆಗೆ ಕರೆಯಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಎಸ್ಐಟಿ ಠಾಣೆಯಲ್ಲಿ ತಡರಾತ್ರಿವರೆಗೂ ಪ್ರತ್ಯೇಕವಾಗಿ ಕೂರಿಸಿ ಪ್ರಶ್ನೆಗಳನ್ನು ಕೇಳಲಾಗಿದೆ. ನನಗೆ ಬುರುಡೆ ಕೊಟ್ಟಿದ್ದೇ ಗಿರೀಶ್ ಮಟ್ಟಣ್ಣ ಎಂದು ಜಯಂತ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೆ ಗಿರೀಶ್ ಮಟ್ಟಣ್ಣನವರ್ ಬುರುಡೆ ಬಗ್ಗೆ ತಮಗೇನು ಗೊತ್ತಿಲ್ಲ ಅಂತಾ ಉತ್ತರಿಸಿದ್ದಾರೆ. ಹೀಗಾಗಿ ಬುರುಡೆ ಮೂಲ ಕುತೂಹಲ ಮೂಡಿಸಿದೆ.
ಸುಜಾತ ಭಟ್ ಇಂಟರ್‌ವ್ಯೂವ್ ಮಾಡಿ ಸದ್ದು ಮಾಡಿದ್ದ ಯೂಟ್ಯೂಬರ್ ಅಭಿಷೇಕ್‌ನನ್ನು ಎಸ್ಐಟಿ ಟೀಂ ವಿಚಾರಣೆ ನಡೆಸಿದೆ. ಗಿರೀಶ್ ಮಟ್ಟಣ್ಣನವರ್, ಜಯಂತ್ ರೀತಿ ಪ್ರತ್ಯೇಕವಾಗಿ ಅಭಿಷೇಕ್‌ನನ್ನು ವಿಚಾರಣೆ ಮಾಡಲಾಗಿದ್ದು, ಬುರುಡೆ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ.
ಕೊಲೆಯಾಗಿದ್ದ ಸೌಜನ್ಯಳ ಮಾವ ವಿಠಲಗೌಡನನ್ನು ಎಸ್ಐಟಿ ವಿಚಾರಣೆ ನಡೆಸಿದೆ. ಈ ವಿಠಲಗೌಡ, ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಜೊತೆ ನಿಕಟ ಸಂಪರ್ಕದಲ್ಲಿದ್ದರು. ಹೀಗಾಗಿ ಬುರುಡೆ ಪ್ರಕರಣದಲ್ಲಿ ವಿಠಲಗೌಡ ಭಾಗಿಯಾಗಿರುವ ಆರೋಪವಿದೆ.
ಧರ್ಮಸ್ಥಳ ಪ್ರಕರಣಕ್ಕೂ ಕೇರಳಕ್ಕೂ ಲಿಂಕ್ ಇದೆ ಎಂದು ಬಿಜೆಪಿ ನಾಯಕರು ಸಾಲು ಸಾಲು ಆರೋಪ ಮಾಡಿದ್ದರು. ಬಿಜೆಪಿ ನಾಯಕರ ಆರೋಪಕ್ಕೆ ಪುಷ್ಟಿ ಎಂಬಂತೆ ಕೇರಳ ಲಿಂಕ್ ಬಯಲಾಗಿದೆ. ಕಳೆದ ವರ್ಷ ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ದುರಂತದಲ್ಲಿ ಈತನ ಲಾರಿ ಕೊಚ್ಚಿ ಹೋಗಿತ್ತು. ಡ್ರೈವರ್ ಅರ್ಜುನ್ ಮೃತಪಟ್ಟಿದ್ದ. ಇದೇ ಲಾರಿಯ ಮಾಲೀಕ ಮನಾಫ್ ಯೂಟ್ಯೂಬ್ ಚಾನಲ್ ಸಹ ಹೊಂದಿದ್ದಾನೆ. ಮುನಾಫ್ ತನ್ನ ಯೂಟ್ಯೂಬ್ ಚಾನಲ್ನನಲ್ಲಿ ಬುರುಡೆ ದೃಶ್ಯವನ್ನು ಅಪ್ಲೋಡ್ ಮಾಡಿದ್ದ. ಕಾಡಿನಲ್ಲಿ ಮರಕ್ಕೆ ಸೀರೆ ಬಿಗಿದ ಸ್ಥಿತಿ, ಪಕ್ಕದಲ್ಲಿದ್ದ ಬುರುಡೆಯನ್ನು ಕತ್ತಿ ಮೂಲಕ ಎತ್ತಿ ಚೀಲಕ್ಕೆ ತುಂಬುತ್ತಿರುವ ವಿಡಿಯೋ ಹಂಚಿಕೊಂಡಿದ್ದ.
ಸರ್ಕಾರ ಎಸ್ಐಟಿ ರಚನೆ ಮಾಡಿದ ಮೇಲೆ ಜಯಂತ್, ಮಹೇಶ್ ಶೆಟ್ಟಿ ತಿಮರೋಡಿಯನ್ನು ಭೇಟಿಯಾಗಿದ್ದರು. ಈ ವೇಳೆ ಮುನಾಫ್ ಕೂಡ ಇದ್ದ. ಇದೇ ಮುನಾಫ್ ತಿಮರೋಡಿ ಹೋರಾಟವನ್ನು ಅಭಿನಂದಿಸಿದ್ದ. ಕೇಸ್ ಆರಂಭಕ್ಕೂ ಮೊದಲೇ ಮನಾಫ್ ಧರ್ಮಸ್ಥಳ, ಬೆಳ್ತಂಗಡಿ, ಉಜಿರೆ ಬಳಿಯೂ ಓಡಾಡಿದ್ದ. ಜಯಂತ್ ಮೂಲಕ ಬುರುಡೆ ಕಥೆಯನ್ನು ಕೇರಳಕ್ಕೂ ಹಬ್ಬಿಸಿದ್ದ ಎನ್ನಲಾಗಿದೆ.
ಮುನಾಫ್ ಬಗ್ಗೆ ಇಷ್ಟೆಲ್ಲ ಮಾಹಿತಿ ಕಲೆ ಹಾಕಿರುವ ಎಸ್ಐಟಿ ಮನಾಫ್ಗೆ ನೋಟಿಸ್ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡಲಾಗಿದೆ. ಶುಕ್ರವಾರ ಈದ್ ಹಬ್ಬ ಇದ್ದ ಕಾರಣ, ಇಂದು ಮುನಾಫ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.








