ಹುಬ್ಬಳ್ಳಿ:
ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ) ಕೇಂದ್ರ ಸರ್ಕಾರವು 2 ಸಾವಿರ ಕೋಟಿ ರೂ. ಹೆಚ್ಚುವರಿ ಹಣ ನೀಡುತ್ತಿದೆ. ದೇಶದ ಎಲ್ಲಾ ಐಐಟಿಗಳಂತೆಯೇ ಇದೂ ಉನ್ನತ ಅಭಿವೃದ್ಧಿ ಕಾಣುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಬಿವಿಬಿ ಕಾಲೇಜಿನಲ್ಲಿ ಭಾನುವಾರ ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘ ಆಯೋಜಿಸಿದ್ದ `ಭಾರತೀಯ ಶಿಕ್ಷಣ ಹಾಗೂ ಶಿಕ್ಷಕರ ನಿಜವಾದ ಪಾತ್ರ’ ಎಂಬ ವಿಷಯ ಕುರಿತ ರಾಷ್ಟ್ರಮಟ್ಟದ ಸಂವಾದದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣದಲ್ಲಿ ಇಂದು ಭಾರತ ಮುನ್ನಡೆ ಸಾಧಿಸಿದ್ದು, 23 ಐಐಟಿಗಳನ್ನು ಹೊಂದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 2020 ಒಂದು ಐತಿಹಾಸಿಕ ಶಿಕ್ಷಣ ಸುಧಾರಣಾ ಯೋಜನೆಯಾಗಿದೆ ಎಂದು ಬಣ್ಣಿಸಿದರು.೨೦೪೭ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ‘ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ’ ಎಂಬ ಕಳಂಕ ತೊಡೆದು ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ ಎಂದು ನುಡಿದರು.
ಸಮಾರೋಪ ಸಮಾರಂಭದಲ್ಲಿ ಧಾರವಾಡ ಐಐಟಿ ಡೀನ್ ಡಾ.ಶಿವಪ್ರಸಾದ ಅವರು ೨೧ನೇ ಶತಮಾನದಲ್ಲಿ ಶಿಕ್ಷಣ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.ಧಾರವಾಡ ವಲಯದ ಕೆಜಿಸಿಟಿಎ ಅಧ್ಯಕ್ಷ ಡಾ.ಮೋತಿಲಾಲ್ ರಾಥೋಡ್, ಕೆಆರ್‌ಎಂಎಂಎಸ್ ಸಂಸ್ಥಾಪಕ ಅಧ್ಯಕ್ಷ ರಘು ಅಕ್ಕಮಂಚಿ, ಪ್ರಸ್ತುತ ಕೆಆರ್‌ಎಂಎಂಎಸ್ ಅಧ್ಯಕ್ಷ ಡಾ. ಗುರುನಾಥ ಬಡಿಗೇರ, ಸಂಘಟನಾ ಕಾರ್ಯದರ್ಶಿ ಡಾ. ಸಿ.ವಿ. ಮರಿದೇವರ ಮಠ ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ಅನುದಾನಿತ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು, ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








