ಬೆಂಗಳೂರು:
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.ಈ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿ 13 ಮಂದಿ ಅರೆಸ್ಟ್ ಆಗಿದ್ದಾರೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ. ಇದನ್ನು ದರ್ಶನ್ ಸಹಿಸಿಲ್ಲ ಎನ್ನಲಾಗಿದೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡಗೆ ಇದೀಗ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಕೈಗೆ ಕೋಳ ಬಿದ್ದ ಮೇಲೆ ಜ್ಞಾನೋದಯವಾಗಿದ್ದು, ಪೊಲೀಸರ ಮುಂದೆ ಪವಿತ್ರಾ ಗೌಡ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪವಿತ್ರ ಗೌಡರನ್ನು ಪ್ರಕರಣದಲ್ಲಿ ಎ1 ಆರೋಪಿಯನ್ನಾಗಿ ಮಾಡಲಾಗಿದೆ.
ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ದರ್ಶನ್ ಗೆ ಹೇಳಿ ತಪ್ಪು ಮಾಡಿದೆ ಎಂದು ವಿಚಾರಣೆ ವೇಳೆ ಪೊಲೀಸರ ಮುಂದೆ ಪವಿತ್ರಗೌಡ ಅಳಲು ತೋಡಿಕೊಂಡಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ಹೇಳಿ ಘನಘೋರ ತಪ್ಪು ಮಾಡಿದೆ. ಅಶ್ಲೀಲ ಮೆಸೇಜ್‍ಗಳನ್ನು ದರ್ಶನ್‍ಗೆ ತೋರಿಸಿ ಹೇಳಬಾರದಿತ್ತು. ಬದಲಾಗಿ ನಾನೇ ಈ ಬಗ್ಗೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಪೊಲೀಸರಿಗೆ ದೂರು ಕೊಟ್ಟಿದ್ರೆ ಕಾನೂನು ಕ್ರಮ ಆಗುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಂದು ಮೆಸೇಜ್ ತೋರಿಸಿ ಹೇಳಿದ್ದೆ ತಪ್ಪಾಯ್ತು. ಇದು ಕೊಲೆಯಾಗುವ ಹಂತಕ್ಕೆ ಹೋಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ರೇಣುಕಾ ಸ್ವಾಮಿಯ ವಿಕೃತಿಯನ್ನು ಮನೆಗೆಲಸದವನಾದ ಪವನ್ಗೆ ಪವಿತ್ರಾ ಗೌಡ ಹೇಳಿದ್ದರು. ‘ಯಾವುದೇ ಕಾರಣಕ್ಕೂ ದರ್ಶನ್‍ಗೆ ಹೇಳಬೇಡ. ಅವನು ಏನಾದ್ರು ಮಾಡಿಬಿಡ್ತಾನೆ’ ಎಂದು ಪವನ್ಗೆ ಕಿವಿಮಾತು ಕೂಡ ಹೇಳಿದ್ದರು. ಆದರೆ, ಪವನ್ ಬಾಯಲ್ಲಿ ಹೆಚ್ಚು ಹೊತ್ತು ಈ ಗುಟ್ಟು ನಿಲ್ಲಲಿಲ್ಲ. ಅವನು ದರ್ಶನ್‍ಗೆ ವಿಚಾರ ತಿಳಿಸಿದ್ದ. ಆಮೇಲೆ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದರು. ಆ ಬಳಿಕ ಹಲ್ಲೆ ನಡೆಸಿ, ಕೊಲೆ ಮಾಡಲಾಯಿತು ಎನ್ನಲಾಗಿದೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಪವಿತ್ರಾ ಗೌಡ ಎಂಟ್ರಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಪವಿತ್ರಾ ಹಾಗೂ ವಿಜಯಲಕ್ಷ್ಮಿ ಮಧ್ಯೆ ಕಿರಿಕ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಓಪನ್ ಆಗಿ ಕಿತ್ತಾಡಿಕೊಂಡಿದ್ದರು. ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಬೇಕು ಎಂದು ಬಯಸಿದ ರೇಣುಕಾಸ್ವಾಮಿ ಅವರು ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು.
ಕೊಲೆಯಾದ ರೇಣುಕ ಸ್ವಾಮಿ ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡೋಕೆ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದರೂ ಹೊಸ ಅಕೌಂಟ್ ಓಪನ್ ಮಾಡಿ ಅಶ್ಲೀಲವಾಗಿ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಇದರಿಂದ ಪವಿತ್ರಾ ಸಾಕಷ್ಟು ಚಿಂತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.