ನವದೆಹಲಿ:
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಪಿಟಿಐ ಗೆ ಸಂದರ್ಶನ ನೀಡಿದ್ದು, ಅಯೋಧ್ಯೆ ತೀರ್ಪು, ಕಾಶ್ಮೀರದ ಆರ್ಟಿಕಲ್ 370, ಸಲಿಂಗ ವಿವಾಹಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.
ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯ ಆರೋಪವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ತಳ್ಳಿಹಾಕಿದ್ದಾರೆ. ಇದೇ ವೇಳೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಟೀಕೆಗಳಿಗೆ ಪ್ರತಿಕ್ರಿಯಿಸಲು ಚಂದ್ರಚೂಡ್ ನಿರಾಕರಿಸಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ನಿರ್ದಿಷ್ಟ ನ್ಯಾಯಾಧೀಶರಿಗೆ ಪ್ರಕರಣಗಳ ಹಂಚಿಕೆ ಮತ್ತು ತೀರ್ಪು ತಮ್ಮ ಪರವಾಗಿ ಬರಲು ನಿರ್ದಿಷ್ಟ ನ್ಯಾಯಾಧೀಶರ ಪೀಠಕ್ಕೆ ಬರುವಂತೆ ನೋಡಿಕೊಳ್ಳುವ ಬೆಂಚ್ ಹಂಟಿಂಗ್, ಖ್ಯಾತ ವಕೀಲರ ಟೀಕೆಗಳ ಕುರಿತ ಪ್ರಶ್ನೆಗಳಿಗೆ ಸಿಜೆಐ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.
ನ್ಯಾಯಾಧೀಶರಿಗೆ ಪ್ರಕರಣಗಳ ಹಂಚಿಕೆಯನ್ನು ವಕೀಲರು ನಿರ್ಧರಿಸುವುದಿಲ್ಲ ಎಂದು ಹೇಳಿದ್ದು ಸುಪ್ರೀಂ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.
“ಸುಪ್ರೀಂ ಕೋರ್ಟ್‌ನ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕಾದರೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಹಂಚಿಕೆಯು ವಕೀಲರ ಪ್ರೇರಿತ ಹಂಚಿಕೆಯಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು ಎಂದು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ.” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಅಯೋಧ್ಯೆ ತೀರ್ಪು ಅನಾಮಧೇಯವಾಗಿತ್ತು, ತೀರ್ಪನ್ನು ಬರೆದ ನ್ಯಾಯಾಧೀಶರ ಹೆಸರನ್ನು ಎಲ್ಲಿಯೂ ಬಹಿರಂಗಗೊಳಿಸಿಲ್ಲವೇಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಿಜೆಐ ಪಂಚ ಸದಸ್ಯ ಪೀಠದ ನ್ಯಾಯಾಧೀಶರು, ತೀರ್ಪು ಪ್ರಕಟಿಸುವ ಮೊದಲು ತೀರ್ಪಿನ ಬಗ್ಗೆ ಚರ್ಚಿಸಲು ಕುಳಿತಾಗ, ಇದು ನ್ಯಾಯಾಲಯದ ತೀರ್ಪು ಎಂದು ನಾವೆಲ್ಲರೂ ಸರ್ವಾನುಮತದಿಂದ ನಿರ್ಧರಿಸಿದ್ದೆವು. ಆದ್ದರಿಂದ ಯಾವುದೇ ವೈಯಕ್ತಿಕ ನ್ಯಾಯಾಧೀಶರಿಗೆ ತೀರ್ಪಿನ ಕರ್ತೃತ್ವವನ್ನು ಹೇಳಲಾಗಿಲ್ಲ.” ಸಿಜೆಐ ಮಾಹಿತಿ ಬಹಿರಂಗ ಮಾಡಿದ್ದಾರೆ.